ಗಂಗಾಧರ ಚಡಚಣ ಹತ್ಯೆ : ಎಸ್‌ಐ ಎಂ.ಬಿ.ಅಸೋಡೆ ಇನ್ನೂ ಸಿಕ್ಕಿಲ್ಲ!
ವಿಜಯಪುರ, ಸೆಪ್ಟೆಂಬರ್ 06 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಎಂ.ಬಿ.ಅಸೋಡೆಗಾಗಿ ಹುಡುಕಾಟ ನಡೆಸುತ್ತಿದೆ. ಈ ಪ್ರಕರಣದಲ್ಲಿ ಎಂ.ಬಿ.ಅಸೋಡೆ 13ನೇ ಆರೋಪಿ.
ಚಡಚಣ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಎಂ.ಬಿ.ಅಸೋಡೆ ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅವರು ಅಡಗಿರಬಹುದು ಎಂದು ಸಿಐಡಿ ಪೊಲೀಸರು ಶಂಕಿಸಿದ್ದಾರೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಎಂ.ಬಿ.ಅಸೋಡೆ ತಲೆಮರೆಸಿಕೊಂಡಿದ್ದರು. ವಿಜಯಪುರ ಸೆಷನ್ಸ್ ಕೋರ್ಟ್‌ನಲ್ಲಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ನೀಡಿರಲಿಲ್ಲ.

ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಿದೆ. ಆದ್ದರಿಂದ, ಹಿರಿಯ ಅಧಿಕಾರಿಗಳು ಎಂ.ಬಿ.ಅಸೋಡೆ ಬಂಧಿಸುವಂತೆ ಸೂಚನೆ ನೀಡಿದ್ದು, ತಂಡ ಹುಡುಕಾಟ ನಡೆಸುತ್ತಿದೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರು ಆರೋಪಿಗಳಾಗಿದ್ದು, ಸಿಐಡಿ ಅವರನ್ನು ಬಂಧಿಸಿದೆ.
2017ರ ಅಕ್ಟೋಬರ್ 30ರಂದು ವಿಜಯಪುರದಲ್ಲಿ ರೌಡಿ ಶೀಟರ್ ಧರ್ಮರಾಜ ಚಡಚಣ ಎನ್‌ಕೌಂಟರ್ ನಡೆದಿತ್ತು. ಪೊಲೀಸರು ಧರ್ಮರಾಜ ಚಡಚಣ ಸಹೋದರ ಗಂಗಾಧರ ಚಡಚಣನನ್ನು ವಶಕ್ಕೆ ಪಡೆದಿದ್ದರು. ಕೆಲವು ದಿನಗಳ ಬಳಿಕ ಹತ್ಯೆಯಾದ ಮಾಹಿತಿ ಬಹಿರಂಗವಾಗಿತ್ತು.












Click it and Unblock the Notifications