ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ನಮ್ಗೆ ಒಂದೇ.. ಒಂದು ಸಾರಿಗೆ ಬಸ್ ಇಲ್ಲ ಸಾರ್: ನಾಗಾರ್ಡಾ ಗ್ರಾಮಸ್ಥರ ಅಳಲು
ವಿಜಯಪುರ, ಡಿಸೆಂಬರ್, 27: ಸಾಮಾನ್ಯವಾಗಿ ಕೆಲವೊಂದು ಹಳ್ಳಿಗಳಿಗೆ ಈಗಲೂ ಬಸ್‌ಗಳ ವ್ಯವಸ್ಥೆಯೇ ಇಲ್ಲ. ಇದರಿಂದ ಬರೀ ಜನರಿಗಲ್ಲದೆ, ವಿದ್ಯಾರ್ಥಿಗಳಿಗೂ ತುಂಬಾ ತೊಂದರೆ. ಹಾಗೆಯೇ ವಿಜಯಪುರ ಜಿಲ್ಲೆ ಖಾನಾಪುರ ತಾಲೂಕಿನಿಂದ ಕೇವಲ 7 ಕಿಲೋ ಮೀಟರ್ ದೂರದಲ್ಲಿರುವ ನಾಗಾರ್ಡಾ ಗ್ರಾಮ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಸಾರಿಗೆ ಸೌಕರ್ಯವನ್ನೇ ಕಂಡಿಲ್ಲದಿರುವುದು ನೋವಿನ ಸಂಗತಿಯಾಗಿದೆ.
ಸುಮಾರು 700 ಜನಸಂಖ್ಯೆ ಇರುವ ನಾಗಾರ್ಡಾ ಗ್ರಾಮದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವುದು ಬರೀ ಇಲ್ಲಿನ ಜನರಲ್ಲದೆ, ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದಿದ್ದರೂ ಇಲ್ಲಿ ಒಂದೇ ಒಂದು ಸಾರಿಗೆ ಬಸ್ಸಿನ ವ್ಯವಸ್ಥೆ ಇಲ್ಲದಂತಾಗಿದೆ. ಜಾಂಬೋಟಿ ಹೋಬಳಿಗೆ ಒಳಪಡುವ ಈ ನಾಗುರ್ಡಾ ಗ್ರಾಮ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಿಂದ 2 ಕಿಲೋ ಮೀಟರ್ ದೂರದಲ್ಲಿದೆ. ರಸ್ತೆಯ ವಿಶ್ರಾಂತವಾಡಿ ಗ್ರಾಮದ ಬಳಿಯ ನಾಗುರ್ಡಾ ಕ್ರಾಸ್‌ನಿಂದ ನಾಗುರ್ಡಾ ಗ್ರಾಮದವರೆಗೆ ಉತ್ತಮ ಗುಣಮಟ್ಟದ ರಸ್ತೆಯೂ ಕೂಡ ಇದೆ.

ರಸ್ತೆಯ ಸ್ಥಿತಿ ಉತ್ತಮ ಆಗಿದ್ದರೂ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಲ್ಲಿ ಸಾರಿಗೆ ಇಲಾಖೆ ಮತ್ತು ತಾಲೂಕು ಆಡಳಿತ ಗಮನಹರಿಸದಿಲ್ಲದಿರುವ ಅಚ್ಚರಿಗೂ ಕಾರಣ ಆಗುತ್ತಿದೆ. ಇನ್ನು ಅಧಿಕಾರಿಗಳು ಈ ಬೇಜವಾಬ್ದಾರಿಯಿಂದಾಗಿ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ಬೇರೆ ದಾರಿಯಿಲ್ಲದೆ ತಮ್ಮೂನಿಂದ ನಾಗುರ್ಡಾ ಕ್ರಾಸ್‌ವರೆಗಿನ 2 ಕಿಲೋ ಮೀಟರ್ ನಡೆದೇ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿಯ ರೈತರು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಹೆಚ್ಚಾಗಿ ಕೈಗೊಂಡಿದ್ದಾರೆ. ಅಲ್ಲದೆ ಅಂತರ್ಜಲ ಉತ್ತಮವಾಗಿದ್ದು, ಮಣ್ಣು ಕೂಡ ಫಲವತ್ತತೆಯಿಂದ ಕೂಡಿದೆ. ಪರಿಣಾಮ ಈ ಭಾಗದ ಅಂದಾಜು 4,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಕಬ್ಬು ಇಡೀ ತಾಲೂಕಿನಲ್ಲೇ ಅತ್ಯಂತ ಹೆಚ್ಚು ಇಳುವರಿ ಕೊಡುವ ಬೆಳೆ ಎಂದು ಗುರುತಿಸಲ್ಪಟ್ಟಿದೆ.
ಉಳಿದಂತೆ ಭತ್ತ, ಗೋಡಂಬಿ, ಮಾವು, ಸಪೋಟ, ಬಾಳೆ ಬೆಳೆಗಳನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ನಾಗಾರ್ಡಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಗ್ರಾಮ ಪಂಚಾಯ್ತಿ ಕಚೇರಿಗಳಿವೆ.
ನರೇಗಾ ಯೋಜಯಡಿ ಗ್ರಾಮದಲ್ಲಿ ವೈಯಕ್ತಿಕ ಮತ್ತು ಅಮುದಾಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಕ್ಕಾಗಿ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ನಾಗುರ್ಡಾ ಗ್ರಾಮ ಪಂಚಾಯ್ತಿಗೆ 2016ರ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.
ಇನ್ನು ಬಸ್ ಸೌಲಭ್ಯ ಇಲ್ಲದಿರುವುದರಿಂದ ಇಲ್ಲಿನ ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣದ ಬಳಿಕ ನಿತ್ಯ ಬೇರೆ ಊರಿಗೆ ಹೋಗಿಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಗ್ರಾಮದಲ್ಲಿ ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸಂಖ್ಯೆ ಒಂದಂಕಿಯನ್ನು ದಾಟಿಲ್ಲ. ಆದರೆ ಗ್ರಾಮದ 100ಕ್ಕೂ ಹೆಚ್ಚು ಗಂಡುಮಕ್ಕಳು ಕಷ್ಟಪಟ್ಟು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಣವನ್ನು ಮುಗಿಸಿ ಭಾರತೀಯ ಸೈನ್ಯವನ್ನು ಸೇರಿ ದೇಶ ಕಾಯುವ ಕೆಲಸ ಮಾಡುತ್ತಿದ್ದಾರೆ.
ನಾಗುರ್ಡಾ ಗ್ರಾಮದಿಂದ ಕಾಟಗಾಳಿ ಮೊದೇಕೊಪ್ಪ ಮತ್ತು ನಾಗುರ್ಡಾ ವಾಡಾ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ ಹಾಳಾಗಿದೆ. ಗ್ರಾಮದ ಮಕ್ಕಳು 7ನೇ ತರಗತಿಯ ಬಳಿಕ ಹೆಚ್ಚಿನ ಶಿಕ್ಷಣಕ್ಕಾಗಿ ಪಟ್ಟಣವನ್ನು ಅಲಂಬಿಸಬೇಕಿದೆ ಎಂದು ವಿಜಯಪಥ ವರದಿ ಮಾಡಿದೆ. ಏನೇ ಆಗಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅತಿ ಬೇಗನೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಿ ನಮ್ಮ ಸಮಸ್ಯೆಯನ್ನು ದೂರ ಮಾಡಿ ಸಾರ್ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.












Click it and Unblock the Notifications