ವಿಜಯಪುರ ಜಿಲ್ಲೆಯಲ್ಲಿ ಸತತ ಭೂಕಂಪನ, ಬೆಚ್ಚಿದ ಆತಂಕ
ವಿಜಯಪುರ, ಆಗಸ್ಟ್ 22: ಜಿಲ್ಲೆಯಲ್ಲಿ ಸತತ ಮೂರು ದಿನಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಗುಮ್ಮಟ ನಗರಿಯ ಜನರಲ್ಲಿ ಆತಂಕ ಮನೆ ಮಾಡಿದೆ.
ಸೋಮವಾರ ಸಾಯಂಕಾಲ 4:26ಕ್ಕೆ ಭೂಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದೆ. ನಗರದ ರೈಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮಟ ಏರಿಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂಮಿಯಲ್ಲಿ ಸದ್ದು ಕೇಳಿಬಂದಿದೆ. ಭೂಮಿಯ 10 ಕೀಮೀ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡಳಿತ ವರದಿ ಮಾಡಿದೆ. ರಾತ್ರಿ 9.22ರ ವೇಳೆಗೂ ಕೆಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿರುವ ವರದಿ ಬಂದಿದೆ.
ಇನ್ನೂ ಆಗಸ್ಟ್ 20ರಂದು ರಾತ್ರಿ 8:15ಕ್ಕೆ 3.5 ತೀವ್ರತೆಯಲ್ಲಿ, ಆಗಸ್ಟ್ 21ರಂದು ಸಂಜೆ 6-26ಕ್ಕೆ 3.1 ತೀವ್ರತೆಯಲ್ಲಿ ಭೂಕಂಪನ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ.

ಕಳೆದ ವಾರ ವಿಜಯಪುರ ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕುಗಳು ಸೇರಿದಂತೆ ಇತರೆ ಭಾಗಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈವರೆಗೆ 19ನೇ ಬಾರಿ ಭೂಕಂಪಿಸಿದೆ. ಮೇಲಿಂದ ಮೇಲೆ ಭೂಕಂಪನ ಆಗುತ್ತಿರೋದಕ್ಕೆ ಜನ ಭಯಭೀತರಾಗಿದ್ದಾರೆ. ಜನರಲ್ಲಿ ಮುಂದೇನಾಗಬಹುದು ಎನ್ನುವ ಆತಂಕ ಕೂಡಾ ವ್ಯಕ್ತವಾಗಿದೆ.

ರಾಜಸ್ಥಾನದಲ್ಲೂ ಭೂಕಂಪ:
ರಾಜಸ್ಥಾನದ ವಾಯುವ್ಯ ಬಿಕನೇರ್ ಪ್ರದೇಶದಲ್ಲಿ ಸೋಮವಾರ ಬೆಳಗಿನ ಜಾವ ಲಘು ಭೂಕಂಪದ ತೀವ್ರತೆ 4.1ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ. ಬೆಳಗಿನ ಜಾವ 2:1 ಗಂಟೆಗೆ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.












Click it and Unblock the Notifications