Vijayapura: ಗೋದಾಮಿನಲ್ಲಿ ಬೃಹತ್ ಯಂತ್ರ ಕುಸಿತ: ಮೂವರು ಕಾರ್ಮಿಕರ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ
ವಿಜಯಪುರ ನಗರದ ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದ ಪರಿಣಾಮ, ಜೋಳ ತುಂಬಿದ ಮೂಟೆಗಳ ಅಡಿ ಸಿಲುಕಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನೂ ಹಲವು ಕಾರ್ಮಿಕರು ಮೂಟೆಗಳ ಅಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.
ಪೊಲೀಸ್, ಹೋಮ್‌ಗಾರ್ಡ್, ಅಗ್ನಿಶಾಮಕ, ಸೇರಿ ಸುಮಾರು 100 ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕ್ರೇನ್, ಜೆಸಿಬಿಗಳನ್ನು ಬಳಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿ ಭೂಬಾಲನ್ ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ ಘಟನೆ ನಡೆದಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದೆ. ಅಪಾರ ಪ್ರಮಾಣದ ಜೋಳ ತುಂಬಿರುವ ಕಾರಣ ರಕ್ಷಣಾ ಕಾರ್ಯಾಚರಣೆ ತಡವಾಗುತ್ತಿದೆ. ಗೋದಾಮಿನಲ್ಲಿ ಸಿಲುಕಿದ್ದ ಹಲವು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಕಲಬುರ್ಗಿ ಹಾಗೂ ಬೆಳಗಾವಿಯಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡ ಘಟನಾ ಸ್ಥಳಕ್ಕೆ ಬಂದಿದೆ.
ಸಚಿವ ಎಂಬಿ ಪಾಟೀಲ್ ಹೇಳಿದ್ದೇನು
ಘಟನೆ ಬಗ್ಗೆ ಟ್ವೀಟ್ ಮಾಡಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಎಂಬಿ ಪಾಟೀಲ್, "ವಿಜಯಪುರದ ಕೆಐಡಿಬಿ ರಾಜಗುರು ಗೋಧಾಮಿನಲ್ಲಿ ಕಾರ್ಮಿಕರು ಸಿಲುಕಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೂ ಸಹ ಈ ಕುರಿತು ಮಾಹಿತಿ ನೀಡಿದ್ದೇನೆ. ಈಗಾಗಲೇ ರಕ್ಷಣಾ ಕಾರ್ಯ ನಡೆದಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ನಾನು ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಲಿದ್ದೇನೆ." ಎಂದು ಹೇಳಿದ್ದರು.
ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ರಾಜ್ಯದಿಂದ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರ ದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಲು ವ್ಯವಸ್ಥೆ ಮಾಡಲಾಗುವುದು. ಕೈಗಾರಿಕೆಯ ಮಾಲೀಕರು ಕೂಡ ಆ ಕುಟುಂಬಗಳಿಗೆ ಪರಿಹಾರ ಕೊಡುವಂತೆ ಮಾಡಲಾಗುವುದು. ಘಟನೆಗೆ ಏನು ಕಾರಣ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications