ನಾನು ಯಾರಿಗೂ ಹೆದರೊಲ್ಲ: ಬಿಜೆಪಿ ನೋಟಿಸ್‌ಗೆ ಯತ್ನಾಳ್ ಸೆಡ್ಡು
Recommended Video
ವಿಜಯಪುರ, ಅಕ್ಟೋಬರ್ 4: ಪ್ರವಾಹದಿಂದ ನಲುಗಿರುವ ರಾಜ್ಯಕ್ಕೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸಂಸದರು ಮತ್ತು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಕ್ಕೆ ಪಕ್ಷದ ಶಿಸ್ತು ಸಮಿತಿಯು ನೀಡಿರುವ ನೋಟಿಸ್‌ಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೆಡ್ಡು ಹೊಡೆದಿದ್ದಾರೆ. ತಾವು ನೆರೆ ಸಂತ್ರಸ್ತರ ಪರವಾಗಿ ಮತ್ತು ಅದನ್ನು ನಿರ್ಲಕ್ಷಿಸುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧವಾಗಿ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ಬಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್, 'ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಯಾವ ಶಕ್ತಿಯೂ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ' ಎಂದು ಹೇಳಿದರು.
ಕೇಂದ್ರದಿಂದ ಜಾರಿ ಮಾಡಿರುವ ನೋಟಿಸ್ ಇನ್ನೂ ಕೈಗೆ ಸಿಕ್ಕಿಲ್ಲ. ನೋಟಿಸ್ ಸಿಕ್ಕ ಬಳಿಕ ಆಪ್ತರೊಂದಿಗೆ ಚರ್ಚಿಸಿ ಸೂಕ್ತ ಉತ್ತರ ನೀಡುತ್ತೇನೆ ಎಂದು ಅವರು ತಿಳಿಸಿದರು.
'ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರ ಪರವಾಗಿ ಮಾತನಾಡಿದ್ದೇನೆ. ನೆರೆ ಸಂತ್ರಸ್ತರ ಪರ ಮಾತು ಮುಂದುವರಿಸುತ್ತೇನೆ. ಸಂತ್ರಸ್ತರ ಪರ ನನ್ನ ಮಾತನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿಲ್ಲ' ಎಂದರು.

ನೋಟಿಸ್‌ಗೆ ಹೆದರುವುದಿಲ್ಲ
'ಯಾವುದೋ ಒಂದು ನೋಟಿಸ್‌ಗೆ ನಾನು ಹೆದರುವುದಿಲ್ಲ. ನೋಟಿಸ್ ಕೊಟ್ಟು ವ್ಯಕ್ತಿಯನ್ನು ನಾಶ ಮಾಡಲು ಆಗುವುದಿಲ್ಲ. ಈಗಲೂ ನಾನು ಪರಿಹಾರ ನೀಡುವಂತೆ ಮೋದಿ ಅವರನ್ನು ಒತ್ತಾಯಿಸುತ್ತೇನೆ. ನನಗೆ ಸುಳ್ಳು ಹೇಳುವ ಅಭ್ಯಾಸ ಇಲ್ಲ' ಎಂದು ಖಡಕ್ಕಾಗಿ ಹೇಳಿದರು.

ನಾವಿದ್ದು ಏನು ಪ್ರಯೋಜನ?
'ಪ್ರವಾಹದಿಂದ ಜನರ ಜೀವನ ಹಾಳಾಗಿದೆ. ಅವರಿಗೆ ಸಿಗಬೇಕಾಗಿದ್ದ ಪರಿಹಾರ ಇನ್ನೂ ಸಿಕ್ಕಿಲ್ಲ. ಜನರ ಕಣ್ಣೀರು ಸುರಿಸುವುದನ್ನು ಮಾಧ್ಯಮಗಳಲ್ಲಿ ನೋಡಿ ನಮಗೂ ಕಣ್ಣೀರು ಬಂದಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಕಣ್ಣೀರು ಒರೆಸಲು ಮುಂದಾಗದೆ ಇದ್ದರೆ ಸಚಿವರಾಗಿ, ಶಾಸಕರಾಗಿ ನಾವಿದ್ದು ಏನು ಪ್ರಯೋಜನ?' ಎಂದು ಪ್ರಶ್ನಿಸಿದರು.

ಏನು ಮಾತನಾಡಬೇಕು ಗೊತ್ತಿದೆ
'ಕಳೆದ 40 ವರ್ಷಗಳಿಂದ ಶಾಸಕ, ಸಂಸದ, ಕೇಂದ್ರ ಸಚಿವ ಮತ್ತು ವಿಧಾನಪರಿಷತ್ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಎಲ್ಲಿ ಏನು ಮಾತನಾಡಬೇಕು ಎನ್ನುವುದು ನನಗೆ ಅರಿವಿದೆ. ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸರ್ಕಾರದ ವಿರುದ್ಧವೂ ಮಾತನಾಡಿಲ್ಲ. ಕನ್ನಡಿಗರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ಜನರ ಪರ ಧ್ವನಿ ಎತ್ತುತ್ತಲೇ ಇರುತ್ತೇನೆ' ಎಂದರು.

ಮೋದಿಯೇ ಶಹಬ್ಬಾಸ್ ಎನ್ನುತ್ತಾರೆ
'ಯಾರಿಂದಲೂ ಬುದ್ಧಿಮಾತು ಹೇಳಿಸಿಕೊಳ್ಳುವ ಅನಿವಾರ್ಯತೆ ನನಗಿಲ್ಲ. ಜನರ ಸಮಸ್ಯೆಯನ್ನು ಕನ್ನಡಿಗರ ಪರವಾಗಿ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಮುಂದೊಂದು ದಿನ ನನ್ನ ಪಕ್ಷ ಮತ್ತು ಕರ್ತವ್ಯ ನಿಷ್ಠೆ ಬಗ್ಗೆ ಸ್ವತಃ ಪ್ರಧಾನಿ ಶಹಬ್ಬಾಸ್ ಎಂದು ಹೇಳುವ ಕಾಲ ಬರುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ಭಾವನೆ ಲಘುವಾಗಿ ಪರಿಗಣಿಸಬೇಡಿ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಸಂಸದರ ನಿಯೋಗವನ್ನು ಕೊಂಡೊಯ್ದು ನೆರೆ ಪರಿಹಾರಕ್ಕೆ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಯಾರೂ ಹಾರಿಕೆಯ ಉತ್ತರ ನೀಡಬಾರದು. ಜನರ ಭಾವನೆಗಳನ್ನು ಲಘುವಾಗಿ ಪರಿಗಣಿಸಬಾರದು. ನಮಗೆ ದಕ್ಷ ಪ್ರಧಾನಿ ಸಿಕ್ಕಿದ್ದಾರೆ. ಸಮಸ್ಯೆ ಬಂದಾಗ ಅವರನ್ನು ಕೇಳಬೇಕು. ಅದನ್ನು ಬಿಟ್ಟು ಮನಬಂದಂತೆ ಏಕೆ ಹೇಳಿಕೆ ನೀಡುತ್ತಿದ್ದೀರಿ? ಎಂದು ಸಂಸದರು ಮತ್ತು ಸಚಿವರ ವಿರುದ್ಧ ಮತ್ತೆ ಹರಿಹಾಯ್ದರು.

ಯತ್ನಾಳರನ್ನು ಮುಗಿಸಲು ಸಾಧ್ಯವಿಲ್ಲ
'ವಿಧಾನ ಪರಿಷತ್‌ನಲ್ಲಿ ಪಕ್ಷೇತರ ಸದಸ್ಯನಾಗಿದ್ದಾಗ ಸಭಾಪತಿ ಶಂಕರಮೂರ್ತಿ ವಿರುದ್ಧ ಮತಚಲಾಯಿಸುವಂತೆ ಆಗಿನ ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು. ಅದಕ್ಕಾಗಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಮತ್ತು 150 ಕೋಟಿ ಅಭಿವೃದ್ಧಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಅದಕ್ಕೆ ಒಪ್ಪದೆಯೇ ಬಿಜೆಪಿಯನ್ನು ಬೆಂಬಲಿಸಿದ್ದೆ. ನಾನು ಸುಳ್ಳು ಹೇಳಲಿಲ್ಲ. ಹಾಗಾಗಿ ಸಿಎಂ ಆಗಲಿಲ್ಲ. ಆದರೆ ಯತ್ನಾಳರನ್ನು ಮುಗಿಸಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯವಿದೆ. ಈಗ ಅದೇ ಜಾಲತಾಣಗಳಲ್ಲಿ ಬಿಜೆಪಿ ಕುರಿತು ನಡೆಯುತ್ತಿರುವ ಚರ್ಚೆಯನ್ನು ನಾಯಕರು ಗಮನಿಸಲಿ' ಎಂದು ಹೇಳಿದರು.












Click it and Unblock the Notifications