ವಿಡಿಯೋ : ಬೆಳ್ತಂಗಡಿಯ ಈ ಬಾಲಕಿ ಕಣ್ಣಿಂದ ಇರುವೆಗಳು ಬರುತ್ತಿವೆ !
ಮಂಗಳೂರು, ಮಾರ್ಚ್ 7 : ಅಚ್ಚರಿಗಳು ಹೇಗೆಲ್ಲ ಎದುರಾಗುತ್ತವೆ ಅನ್ನೋದಿಕ್ಕೆ ಇಲ್ಲೊಂದು ಉದಾಹರಣೆ ಇದೆ. ಕಣ್ಣಿನಿಂದ ಕಲ್ಲುಗಳು ಉದುರುವ ಘಟನೆಗಳು ಆಗಾಗ ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ಬಾಲಕಿಯ ಕಣ್ಣಿನಿಂದ ಇರುವೆಗಳು ಹೊರಬರುತ್ತಿರುವ ವಿಚಿತ್ರ ಘಟನೆ ನಡೆದಿದೆ. ಇದರಿಂದ ಗಾಬರಿಗೊಂಡ ಪೋಷಕರು ಜ್ಯೋತಿಷಿಗಳು, ವೈದ್ಯರ ಸಹಿತ ಎಲ್ಲರ ಬಳಿಯೂ ತೆರಳಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನೆಲ್ಲಿಂಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯ ಓದುತ್ತಿರುವ ವಿಧ್ಯಾರ್ಥಿನಿ ಕಣ್ಣಿನಿಂದ ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸುಮಾರು ಐದಾರು ಇರುವೆಗಳು ಉದುರುತ್ತಿವೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಮನೆಯವರು ವಿದ್ಯಾರ್ಥಿನಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದಾಗ ರಾತ್ರಿ ವೇಳೆಯಲ್ಲಿ ಕಿವಿಯ ಮೂಲಕ ಇರುವೆಗಳು ಒಳ ಪ್ರವೇಶಿಸಿರಬೇಕೆಂದು ತಿಳಿಸಿ, ಕಣ್ಣಿಗೆ ಹಾಕಲು ಔಷಧವನ್ನು ನೀಡಿದ್ದಾರೆ. ಆದರೂ ಕಣ್ಣಿನಿಂದ ಇರುವೆಗಳು ಉದುರುವುದು ನಿಲ್ಲದ ಕಾರಣ ಮನೆಯವರು ಜ್ಯೋತಿಷಿಗಳ ಮೊರೆ ಹೋಗಿದ್ದರು.

ನಾಗದೋಷ ಇದೆ ಎಂದ ಜ್ಯೋತಿಷಿ
ಶಿರ್ತಾಡಿಯಲ್ಲಿ ಜ್ಯೋತಿಷಿಯೊಬ್ಬರ ಬಳಿಗೂ ತೆರಳಿದಾಗ, ನಿಮಗೆ ನಾಗದೋಷ ಇದ್ದು, ನಿಮ್ಮ ಮನೆ ಸುತ್ತ ನಾಗಸಂಚಾರ ಇದೆ ಎಂದು ಹೇಳಿ ಕಳುಹಿಸಿದ್ದಾರೆ. ಈ ನಡುವೆ ಶಾಲೆಯ ಶಿಕ್ಷಕರು ಸೋಮವಾರ ಬಾಲಕಿಯನ್ನು ಮೂಡಬಿದಿರೆ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಇರುವೆ ಬರುವುದನ್ನು ನೋಡದೆ ಏನನ್ನೂ ಹೇಳಲಾಗದು ಎಂದು ತಿಳಿಸಿದ್ದಾರೆ.

ಬೆಳಗ್ಗೆ ಎದ್ದಾಗ ಕಣ್ಣಿನಲ್ಲಿ ತುರಿಕೆ
ಕೆಲವು ದಿನಗಳ ಹಿಂದೆ ಬೆಳಗ್ಗೆ ಎದ್ದಾಗ ಬಾಲಕಿಗೆ ಕಣ್ಣಿನಲ್ಲಿ ತುರಿಕೆ ಕಂಡು ಬಂದಿದೆ. ಈ ವೇಳೆ ಗಮನಿಸಿದಾಗ ಕಣ್ಣಿನ ಕೆಳಭಾಗದಲ್ಲಿ ಇರುವೆ ಇರುವುದು ಪತ್ತೆಯಾಗಿದೆ. ರಾತ್ರಿ ವೇಳೆ ಬಿದ್ದಿರಬೇಕೆಂದು ಮನೆ ಮಂದಿ ಸುಮ್ಮನಾಗಿದ್ದಾರೆ. ಆದರೆ ಕಲವೇ ಗಂಟೆಗಳಲ್ಲಿ ಮತ್ತೆ ಅದೇ ಕಣ್ಣಿನಲ್ಲಿ ಇರುವೆ ಕಾಣಿಸಿಕೊಂಡಿದೆ. ಇರುವೆ ಹೊರ ಬರುವಾಗ ಕಣ್ಣಿನಲ್ಲಿ ಸ್ವಲ್ಪ ಪ್ರಮಾಣದ ನೋವು ಇರುತ್ತದೆ ಎಂದು ಬಾಲಕಿ ತಿಳಿಸಿದ್ದಾಳೆ.

50 ಇರುವೆಗಳು ಕಣ್ಣಿನಿಂದ ಹೊರಬಂದಿವೆ
ಕಣ್ಣಿನಲ್ಲಿ ಕಲ್ಲುಗಳು ಉದುರುತ್ತವೆ ಎಂದು ಕೇಳಿದ್ದೇವೆ. ಆದರೆ ಈ ಬಾಲಕಿಯ ಕಣ್ಣುಗಳಿಂದ ಇರುವೆ ಬರುವುದು ಮಾತ್ರ ವಿಚಿತ್ರವೇ ಆಗಿದೆ. ಇಲ್ಲಿಯವರೆಗೆ ಸುಮಾರು 50 ಇರುವೆಗಳು ಕಣ್ಣಿನಿಂದ ಹೊರಬಂದಿವೆ ಎಂದು ಹೇಳಲಾಗಿದ್ದು, ವೈದ್ಯರು ಇರುವೆ ಕಣ್ಣಿನಿಂದ ಬರುವುದನ್ನು ನೋಡದೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಆತಂಕದಲ್ಲಿ ಪೋಷಕರು
ಈ ರೀತಿ ಇರುವೆ ಕಾಣಿಸಿಕೊಳ್ಳುತ್ತಿರುವುದರಿಂದ ಬಾಲಕಿಗೆ ತನ್ನ ನಿತ್ಯದ ಕೆಲಸ-ಕಾರ್ಯಗಳನ್ನು ಮಾಡಿಕೊಳ್ಳಲು ಸಮಸ್ಯೆ ಆಗುತ್ತಿದೆ. ಯಾವುದೋ ಸಮಯದಲ್ಲಿ ಕಣ್ಣಿನಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡಂತೆ ಆಗುತ್ತದೆ. ಆಗೆಲ್ಲ ಇರುವೆ ಇರುವುದು ಕಂಡುಬರುತ್ತದೆ. ಪರಿಹಾರ ಕೂಡ ಸರಿಯಾಗಿ ಸಿಗುತ್ತಿಲ್ಲವಾದ್ದರಿಂದ ಬಾಲಕಿಯ ಪೋಷಕರೂ ಆತಂಕಗೊಂಡಿದ್ದಾರೆ.












Click it and Unblock the Notifications