ಉಡುಪಿ; ರಸ್ತೆ ಗುಂಡಿ ಮುಚ್ಚಲು ಆಗ್ರಹ, ಗಿಡ ನೆಟ್ಟು ಪ್ರತಿಭಟನೆ
ಉಡುಪಿ, ಜೂನ್ 16; ಕರಾವಳಿಯಲ್ಲಿ ಮಳೆ ಜೋರಾಗಿದೆ. ಮುಂಗಾರಿನ ಆಗಮನದೊಂದಿಗೇ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಹೊಂಡ ಮುಚ್ಚದ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದರು. ರಸ್ತೆ ಹೊಂಡದಲ್ಲಿ ಗಿಡ ನೆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಸರಕಾರದ ಮುಖ್ಯ ಸಚೇತಕರು ಹೌದು. ಕೋವಿಡ್ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಿಳಿ ಬೆಂಡೆ ಬೀಜ ಹಂಚುವ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.

ಬಿಳಿ ಬೆಂಡೆ ಬೀಜವನ್ನು ಕ್ಷೇತ್ರದಾದ್ಯಂತ ಹಂಚುವ ಆಂದೋಲನವನ್ನೇ ಸುನಿಲ್ ಕುಮಾರ್ ಮಾಡುತ್ತಿದ್ದಾರೆ. ಆದರೆ ಜನರಿಗೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯ ಮತ್ತು ಕೊರೊನಾ ನಿಯಂತ್ರಣದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದರು.
ರಸ್ತೆ ಸರಿ ಮಾಡಿಸಿ ಎಂದು ಆಗ್ರಹಿಸಲು ಬೆಂಡೆ ಗಿಡವನ್ನೇ ತಂದು ರಸ್ತೆಯ ಹೊಂಡದಲ್ಲಿ ನೆಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವಿಶಿಷ್ಟ ರೀತಿಯ ಪ್ರತಿಭಟನೆ ಜನರ ಗಮನ ಸೆಳೆಯಿತು.












Click it and Unblock the Notifications