ಉಡುಪಿ ಪರ್ಯಾಯ ಎಂದರೇನು..? ಕೃಷ್ಣನೂರಿನಲ್ಲಿ ಈ ಬಾರಿ ಪರ್ಯಾಯದ ವಿಶೇಷತೆ ಏನು?
ಉಡುಪಿ, ಜನವರಿ 17: ಕೃಷ್ಣ ನಗರಿ ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ನಡೆಯುತ್ತಿದೆ. ಕೃಷ್ಣ ಮಠದ ದ್ವೈವಾರ್ಷಿಕ ಉತ್ಸವವಾಗಿರುವ ಪರ್ಯಾಯ ಮಹೋತ್ಸವ ದಲ್ಲಿ ಈ ಬಾರಿ ಪುತ್ತಿಗೆ ಶ್ರೀಗಳು ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ.
ಉಡುಪಿ ಕೃಷ್ಣ ಮಠದ ವ್ಯಾಪ್ತಿಯಲ್ಲಿ ಒಟ್ಟು 8 ಮಠಗಳಿವೆ. ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶೀರೂರು ಮಠಗಳಾಗಿವೆ. 2 ವರ್ಷಕೊಮ್ಮೆ ಅಷ್ಟಮಠಗಳ ಪೈಕಿ ಕೃಷ್ಣ ಮಠದ ಪೂಜಾ ಕೈಂಕರ್ಯದ ಹಾಗೂ ಮಠದ ಅಧಿಕಾರ ಹಸ್ತಾಂತರ ನಡೆಯುತ್ತದೆ.

ಒಂದು ಸುತ್ತು ಅಂದರೆ 12 ವರ್ಷಗಳ ಬಳಿಕ ಪೂಜಾ ಕೈಂಕರ್ಯದ ಅವಕಾಶ ಒಲಿದು ಬರುತ್ತದೆ. ಕೃಷ್ಣ ಮಠದ ಪೂಜೆಯ ಅಧಿಕಾರ ಹಸ್ತಾಂತರದ ಸುಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಕರೆಯುತ್ತಾರೆ..ಕಳೆದ ಬಾರಿ ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರತೀರ್ಥ ಸ್ವಾಮೀಜಿಗಳು ಪರ್ಯಾಯ ಪೀಠಾರೋಹಣ ಮಾಡಿದ್ದರು.
ಈ ಬಾರಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ನಡೆಯಲಿದೆ. ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸವನ್ನು ಉಡುಪಿ ಪರ್ಯಾಯ ಮಹೋತ್ಸವ ಹೊಂದಿದೆ. ಪ್ರತಿ ಎರಡು ವರ್ಷಕೊಮ್ಮೆ ಜನವರಿ 18 ರಂದು ಪರ್ಯಾಯ ಉತ್ಸವ ನಡೆಯುತ್ತದೆ. ಈ ಬಾರಿಯದ್ದು 252ನೇ ಪರ್ಯಾಯ ಮಹೋತ್ಸವವಾಗಿದ್ದು, ಪುತ್ತಿಗೆ ಮಠದ ನಾಲ್ಕನೇ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪರ್ಯಾಯ ಮಹೋತ್ಸವ ಹಿನ್ನಲೆಯಲ್ಲಿ ಸ್ವಚ್ಛಗೊಂಡು ಉಡುಪಿ ನಗರದ ಬೀದಿಗಳು ಸಿಂಗಾರಗೊಂಡಿದೆ.ಪರ್ಯಾಯ ಮಹೋತ್ಸವ ಕ್ಕೆ ಪ್ರತಿದಿನ 15 ರಿಂದ 20 ಸಾವಿರ ಭಕ್ತರ ಆಗಮನವಾಗುತ್ತಿದೆ.ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ನಾಲ್ಕನೇ ಬಾರಿ ಪರ್ಯಾಯ ಪೀಠೋಹರಣವಾಗುತ್ತಿದೆ.

ಪರ್ಯಾಯ ಕಾಲದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಕನಕದಾಸ ಮಂಟಪ ವೇದಿಕೆಯಲ್ಲಿ ನಿತ್ಯ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಉಡುಪಿ ವಿವಿಧ ಭಾಗಗಳಲ್ಲಿ ವೇದಿಕೆ ಸಜ್ಜಾಗಿದ್ದು, ರಥ ಬೀದಿ ,ಪಾರ್ಕಿಂಗ್, ಪಿಪಿಸಿ ಕಾಲೇಜ್, ಜೋಡುಕಟ್ಟೆ ಸೇರಿದಂತೆ ವಿಧದ ಕಡೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಎಲ್ಲಾ ವೇದಿಕೆಯಲ್ಲಿ ಭಜನೆ ,ಸಂಗೀತ ರಸಮಂಜರಿ ಯಕ್ಷಗಾನ, ನಾಟಕ ಕಾರ್ಯಕ್ರಮ ನಡೆಯಲಿದೆ.
ಉಡುಪಿ ಕೃಷ್ಣ ಮಠದ ಪರ್ಯಾಯ ಪೀಠಾಧಿಪತಿಗಳಿಗೂ ಹಲವು ನಿಯಮಗಳಿವೆ. ಪೀಠಾರೋಹಣದ ಬಳಿಕ ಕೃಷ್ಣ ಮಠದ ರಥಬೀದಿ ಬಿಟ್ಟು ಹೋಗುವಂತಿಲ್ಲ. ಹೊರಗಿನ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಉಡುಪಿ ಶ್ರೀ ಕೃಷ್ಣನ ಪೂಜ ಕೈಂಕರ್ಯವೇ ಮೂಲ ಜವಾಬ್ದಾರಿಯಾಗಿದೆ.
ಆದರೆ ಸದ್ಯ ಪರ್ಯಾಯ ಏರುತ್ತಿರುವ ಪುತ್ತಿಗೆ ಶ್ರೀ 2008ರಲ್ಲಿ ಪುತ್ತಿಗೆ ಶ್ರೀ ಸಮುದ್ರ ಉಲ್ಲಂಘನೆ ಮಾಡಿದ್ದ ಬಗ್ಗೆ ಅಸಮಾಧಾನವಿದೆ. ಅಷ್ಠ ಮಠದ ಯತಿಗಳು ಸಮುದ್ರ ದಾಟಿ ವಿದೇಶಕ್ಕೆ ಹೋಗಬಾರದು ಎಂಬ ನಿಯಮವಿದೆ. ಆದರೆ ವಿದೇಶಕ್ಕೆ ಹೋಗಿ ಕೃಷ್ಣನ ಆರಾಧನೆಗೈದಿದ್ದ ಪುತ್ತಿಗೆ ಶ್ರೀ ವಿರುದ್ಧ ಮಠಾಧಿಪತಿಗಳ ಅಸಮಾಧಾನ ಇದೆ. ಸಮುದ್ರ ಉಲ್ಲಂಘನೆ ಮಾಡಿದ್ದ ಹಿನ್ನಲೆ ಪುತ್ತಿಗೆ ಪರ್ಯಾಯವನ್ನು ಇತರೆ ಯತಿಗಳು ಬಹಿಷ್ಕಾರ ಮಾಡಿದ್ದರು. 2008ರಲ್ಲಿ ಪುತ್ತಿಗೆ ಪರ್ಯಾಯಕ್ಕೆ ಉಳಿದ 6 ಮಠದ ಸ್ವಾಮೀಜಿಗಳು ಗೈರಾಗಿದ್ದರು. ಈ ಬಾರಿಯೂ ಗೊಂದಲಗಳೊಂದಿಗೆ ಪುತ್ತಿಗೆ ಪರ್ಯಾಯ ಕೂಡಿದೆ. ಈ ಬಾರಿಯ ಪುತ್ತಿಗೆ ಪರ್ಯಾಯಕ್ಕೆ ಭಾಗಿಯಾಗುತ್ತಾರ ಇತರೆ ಯತಿಗಳು ಎಂಬುವುದು ಕುತೂಹಲಕಾರಿಯಾಗಿದೆ.












Click it and Unblock the Notifications