ಪೊದೆ ಆವರಿಸಿದ್ದ ಭಯಾನಕ ಮನೆಯಲ್ಲಿ ಬದುಕು ಸಾಗಿಸುತ್ತಿದ್ದ ಮನೋರೋಗಿ
ಉಡುಪಿ, ಆಗಸ್ಟ್ 21: ಗಿಡ ಗಂಟಿ ಬೆಳೆದು ಪೊದೆ ಆವರಿದ್ದ ಭಯಾನಕ ಮನೆಯಲ್ಲಿ ಬದುಕು ಸಾಗಿಸುತ್ತಿದ್ದ ಮನೋರೋಗಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರು ರಕ್ಷಿಸಿದ್ದಾರೆ.
ನಗರದ, ಬೈಕಾಡಿ ಭದ್ರಗಿರಿ ಚರ್ಚ್ ರಸ್ತೆಯ ಹತ್ತಿರ ನಾಗರಿಕ ಸಮಾಜದಲ್ಲಿ ಅನಾಗರಿಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ, ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ವ್ಯಕ್ತಿ ಅಸಹಾಯಕ ಸ್ಥಿತಿಯಲ್ಲಿರುವ ಬಗ್ಗೆ, ಬ್ರಹ್ಮಾವರ ಕ್ಷಯರೋಗ ಘಟಕದ ಮೇಲ್ವಿಚಾರಕ ಮಂಜುನಾಥ್ ಆಲಂದೂರು ಅವರು, ಸಮಾಜಸೇವಕರಿಗೆ ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು, ಆಶಾ ಕಾರ್ಯಕರ್ತೆ ತುಳಸಿ ಬೈಕಾಡಿ ಅವರು ಸಹಕರಿಸಿದರು.
ರಕ್ಷಿಸಲ್ಪಟ್ಟಿರುವ ರೋಗಿಯನ್ನು ಆಲ್ಫರ್ಡ್ ಡಿಸೋಜ (58 ವರ್ಷ) ತಂದೆ ರೆಗೋರಿ ಡಿಸೋಜ ಎಂದು ಗುರುತಿಸಲಾಗಿದೆ. ಆಲ್ಫರ್ಡ್ ಅವರು ಬಿ.ಎಸ್.ಸಿ ಪದವವೀಧರ, ಈ ಹಿಂದೆ ಉನ್ನತ ಉದ್ಯೋಗದಲ್ಲಿದ್ದವರೆಂದು ತಿಳಿದುಬಂದಿದೆ. ಇವರ ಸಂಬಂಧಿಕರು ಇದ್ದಲ್ಲಿ ಡಾ.ಎ.ವಿ ಬಾಳಿಗ ಆಸ್ಪತ್ರೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಅನಾಥ ಶವಗಳಿಗೆ ಶವಸಂಸ್ಕಾರ, ಶವಗಳನ್ನು ವಾರಸುದಾರರಿಗೆ ತಲುಪಿಸುವ, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ತಮ್ಮದೇ ಖರ್ಚಿನಲ್ಲಿ ಆಸ್ಪತೆಗೆ ದಾಖಲಿಸುವ, ಅಪರೂಪದ ಕಾಯಿಲೆಯಿಂದ ಬಳಲುವ ಬಡವ್ಯಕ್ತಿಗಳಿಗೆ ತಮ್ಮದೇ ದುಡ್ಡಿನಲ್ಲಿ ಚಿಕಿತ್ಸೆ ಕೊಡಿಸುವ .. ಹೀಗೆ, ಸಮಾಜ ಮತ್ತು ದೇವರು ಮೆಚ್ಚುವ ಕೆಲಸವನ್ನು ವಿಶುಶೆಟ್ಟಿ ಮಾಡುತ್ತಾ ಬರುತ್ತಿದ್ದಾರೆ.

ಹಾಳುಬಿದ್ದಿರುವ ನಾಡ ಹೆಂಚಿನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು
ಮನೋರೋಗಿಯು ಹಾಳುಬಿದ್ದಿರುವ ನಾಡ ಹೆಂಚಿನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮನೆಯ ಗೋಡೆಗಳು ಕಳೆದ ವರ್ಷದ ಮಳೆಗಾಲದಲ್ಲಿಯೇ ಸಂಪೂರ್ಣ ಕುಸಿದು ಬಿದ್ದು ಒಂದು ಪಾರ್ಶ್ವ ಮಾತ್ರ ಉಳಿದು ಕೊಂಡಿತ್ತು. ಇವರನ್ನು ವಿಶು ಶೆಟ್ಟಿ ರಕ್ಷಿಸಿದ್ದಾರೆ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರು ಈ ರೀತಿಯ ಸಾಮಾಜಿಕ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಲೇ ಇರುತ್ತಾರೆ.

ಪಾಳುಬಿದ್ದಿರುವ ಮನೆಯ ಅಟ್ಟದಲ್ಲಿ ಆಲ್ಫರ್ಡ್ ಡಿಸೋಜರು ದಿನಗಳನ್ನು ಕಳೆಯುತ್ತಿದ್ದರು
ಮನೆಯ ಅವಶೇಷಗಳು ಅಲ್ಲಲ್ಲಿ ಬಿದ್ದುಕೊಂಡಿದ್ದವು. ಬಾಕಿ ಉಳಿದಿರುವ ಮನೆಯ ಮಣ್ಣಿನ ಗೋಡೆಗಳು ಮಳೆ ನೀರಿಗೆ ತೇವಗೊಂಡು ಉರುಳಿ ಬೀಳುವ ಅಪಾಯದ ಸ್ಥಿತಿಯಲ್ಲಿದ್ದವು. ಬೆಳಕಿನ ವ್ಯವಸ್ಥೆ ಇಲ್ಲದಿರುವ ಅಪಾಯ ಆಹ್ವಾನಿಸುವ ಪಾಳುಬಿದ್ದಿರುವ ಮನೆಯ ಅಟ್ಟದಲ್ಲಿ ಆಲ್ಫರ್ಡ್ ಡಿಸೋಜರು ದಿನಗಳನ್ನು ಕಳೆಯುತ್ತಿದ್ದರು.

ಪಕ್ಕದ ಮನೆಯವರು ನೀಡಿರುವ ಆಹಾರದಿಂದ ಅವರು ಉದರ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು
ಅಕ್ಕ ಪಕ್ಕದ ಮನೆಯವರು ನೀಡಿರುವ ಆಹಾರದಿಂದ ಅವರು ಉದರ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು. ಮನೆ ಇರುವ ಸ್ಥಳದಲ್ಲಿ ಗಿಡ ಗಂಟಿಗಳು ಪೊದೆಗಳಾಗಿ, ಬೆಳೆದು ಪಾಳುಮನೆಯನ್ನು ಆವರಿಸಿಕೊಂಡಿದ್ದವು. ಮನೆ ಸರಿಯಾಗಿ ಹೊರ ವಲಯಕ್ಕೆ ಗೋಚರಿಸುತ್ತಿರಲಿಲ್ಲ. ಹಾವು, ಚೇಳು, ಮೊದಲಾದ ವಿಷ ಜಂತುಗಳ ಸಂಚಾರ ಇರುವುದರಿಂದ ರಕ್ಷಣೆಗಾಗಿ ಮನೆಯ ಅಟ್ಟವನ್ನು ಆಶ್ರಯಿಸುತ್ತಿದ್ದೆ ಎಂದು ಆಲ್ಫರ್ಡ್ ಡಿಸೋಜರು ಹೇಳಿಕೊಂಡಿರುವರು.

ರೋಗಿಗೆ ಪುರ್ನವಸತಿ ವ್ಯವಸ್ಥೆಗೊಳಿಸಬೇಕೆಂದು ವಿಶು ಶೆಟ್ಟಿ ಅವರು ಆಗ್ರಹ
"ನಾಗರೀಕ ಸಮಾಜದ ನಡುವೆ, ಒರ್ವ ವ್ಯಕ್ತಿ ದಯನೀಯ ಸ್ಥಿತಿಯಲ್ಲಿ ಅಸಹಾಯಕವಾಗಿ ಬದುಕು ಸಾಗಿಸುತ್ತಿರುವುದು ದುರಂತದ ಸಂಗತಿ. ಆಡಳಿತ ವ್ಯವಸ್ಥೆಗಳು ಇದುವರೆಗೂ ರೋಗಿಯನ್ನು ರಕ್ಷಿಸಿ, ಔಷೋಧೋಪಚಾರ ನಡೆಸಿ ಪುರ್ನವಸತಿ ಕಲ್ಪಿಸದಿರುವುದು ವಿಪರ್ಯಾಸದ ಸಂಗತಿ" ಎಂದು ವಿಶು ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ರೋಗಿಗೆ ಪುರ್ನವಸತಿ ವ್ಯವಸ್ಥೆಗೊಳಿಸಬೇಕೆಂದು ವಿಶು ಶೆಟ್ಟಿ ಅವರು ಆಗ್ರಹಿಸಿದ್ದಾರೆ.












Click it and Unblock the Notifications