ಹೊಸ ಫಿಶ್ ಮಿಲ್ ಘಟಕ ಬರುವ ಭೀತಿ: ಗ್ರಾ.ಪಂ.ಗೆ ಬೀಗ ಜಡಿದ ಗ್ರಾಮಸ್ಥರು!
ಉಡುಪಿ, ಫೆಬ್ರವರಿ 20: ಉಡುಪಿ ಸಮೀಪದ ಉದ್ಯಾವರ ಗ್ರಾಮ ಪಂಚಾಯತಿಗೆ ಗ್ರಾಮಸ್ಥರು ಬೀಗ ಜಡಿದ ಪ್ರಸಂಗ ನಡೆದಿದೆ. ಉದ್ಯಾವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಫಿಶ್ ಮಿಲ್ ಗಳು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ.
ಈಗ ಹೊಸ ಫಿಶ್ ಮಿಲ್ ಗಳು ಪರಿಸರಕ್ಕೆ ಸಾಕಷ್ಟು ಹಾನಿ ಮಾಡುವುದರ ಜೊತೆಗೆ ಸ್ಥಳೀಯರ ಬದುಕನ್ನು ನರಕವನ್ನಾಗಿಸಿದೆ. ಇದರ ಮಧ್ಯೆಯೇ ಪಿತ್ರೋಡಿಯಲ್ಲಿ ಇನ್ನಷ್ಟು ಫಿಶ್ ಮಿಲ್ ಗಳನ್ನು ಮತ್ತು ಕೈಗಾರಿಕೆಗಳನ್ನು ತರುವ ಹುನ್ನಾರ ನಡೆದಿದೆ ಎಂಬ ಕಾರಣಕ್ಕೆ ಸ್ಥಳೀಯರು ಆಕ್ರೋಶಗೊಂಡು ಗ್ರಾ.ಪಂ ಸದಸ್ಯರ ಬೆಂಬಲದೊಂದಿಗೆ ಬೀಗ ಜಡಿದರು.
ಕರಾವಳಿ ಜಿಲ್ಲೆಗೆ ಕಳಪೆ ಗುಣಮಟ್ಟದ ಕುಚಲಕ್ಕಿ: ಸಿಎಂಗೆ ದೂರು
ಹಲವು ಸಮಯಗಳಿಂದ ಪಿತ್ರೋಡಿಯಲ್ಲಿ ಕಾರ್ಯಾಚರಿಸುತ್ತಿರುವ, ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡುವ ಫಿಶ್ ಮಿಲ್ ಗಳು ಜನರ ನಿದ್ದೆಗೆಡಿಸಿರುವುದು ಹೌದು. ಈ ಮಧ್ಯೆ ಈ ಹಿಂದೆ ಬಂದ ಪಂಚಾಯತ್ ಆಡಳಿತಾಧಿಕಾರಿ ಪಿತ್ರೋಡಿಯನ್ನು ಕೈಗಾರಿಕಾ ವಲಯವನ್ನಾಗಿ ಪರಿವರ್ತನೆ ಮಾಡಲು ಹುನ್ನಾರ ನಡೆಸಿದ್ದಾರೆ ಎಂಬುದು ಗ್ರಾಮಸ್ಥರ ಅಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಈ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದ್ದು, ಆದೇಶ ಬರಲು ಇನ್ನೂ ಬಾಕಿ ಇದೆ. ಹೀಗಿರುವಾಗಲೇ ಇನ್ನಷ್ಟು ಫಿಶ್ ಮಿಲ್ ಗಳನ್ನು ಗ್ರಾಮಕ್ಕೆ ತರುವ ಹುನ್ನಾರದ ವಾಸನೆ ಗ್ರಾಮಸ್ಥರಿಗೆ ಬಡಿದಿದ್ದು, ಪಂಚಾಯತಿಗೆ ಬೀಗ ಜಡಿಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ನ ಸುತ್ತಮುತ್ತ ಸಾಕಷ್ಟು ಜನ ಗ್ರಾಮಸ್ಥರು ನೆರೆದಿದ್ದಾರೆ.
ಫಿಶ್ ಮಿಲ್ ಘಟಕವು ಮೀನು ಮತ್ತು ಮೀನಿನ ತ್ಯಾಜ್ಯದಿಂದ ಪೌಡರ್ ಮತ್ತು ಎಣ್ಣೆ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡುವ ಕೆಲಸ ಮಾಡುತ್ತಿದೆ.