ಬೀರು ಬೇಸಿಗೆಗೆ ಬಳಲಿದ ಗೋವುಗಳ ಹೊಟ್ಟೆ ತಣಿಸಿದ ಕೂಲ್ ಕಲ್ಲಂಗಡಿ: ಇದು ಗೋಪಾರ್ಟಿ
ಉಡುಪಿ, ಮೇ 02: ವಾತಾವರಣದಲ್ಲಿನ ತಾಪಮಾನ ಏರಿಕೆ ಕೇವಲ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಕಾಡುತ್ತಿದೆ. ಅದರಲ್ಲೂ ಹಟ್ಟಿಯಿಂದ ಹೊರಗೆ ತಿರುಗಾಡುವ ಹಸುಗಳು ನೀರಿಗಾಗಿ ಸಂಕಟಪಡುತ್ತಿವೆ. ಇನ್ನು ಕೊಟ್ಟಿಗೆ ಒಳಗೆ ಇರುವ ಹಸುಗಳು ಸಹ ಧಗೆಯಿಂದ ಹೈರಣಾಗಿ ಹೋಗುತ್ತಿವೆ. ನೀರು ಹಾಗೂ ತಂಪಾದ ಆಹಾರಗಳನ್ನು ನೀಡಿ ಹಸುಗಳನ್ನು ಈ ಬೇಸಿಗೆಯ ಧಗೆಯಿಂದ ರಕ್ಷಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಗೋಪಾರ್ಟಿ ಹೆಸರಲ್ಲಿ ಗೋ ಸೇವೆ ನಡೆಸುತ್ತಿರುವ ಉಡುಪಿಯ ಯುವಕರ ತಂಡವೊಂದು ನೀಲಾವರ ಗೋಶಾಲೆಯಲ್ಲಿ ಬಿಸಿಲಿನಿಂದ ಬಳಲಿದ ಹಸುಗಳಿಗೆ ಕೆಜಿಗಟ್ಟಲೆ ಕಲ್ಲಂಗಡಿ ಕೊಟ್ಟು ಸಾರ್ಥಕತೆ ಮೆರೆದಿದ್ದಾರೆ.

ಅನಾಥ ಹಸುಗಳ ಆಪ್ತರಕ್ಷಕ ಈ ನೀಲಾವರ ಗೋಶಾಲೆ. ಉಡುಪಿ ಜಿಲ್ಲೆಯಲ್ಲಿ ಪೇಜಾವರ ಮಠಾಧೀಶರ ನಡೆಸುವ ಗೋಶಾಲೆಯಲ್ಲಿ ಸಾವಿರಾರು ಗೋವುಗಳಿವೆ. ಸೆಖೆಯಿಂದ ಸಂಕಟ ಪಡುತ್ತಿರುವ ಗೋವುಗಳಿಗೆ ಯುವಕರ ತಂಡದವರು 3,000 ಕೆಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟಿದ್ದಾರೆ. ಗೋಶಾಲೆಗೆ ಬಂದು ಕಲ್ಲಂಗಡಿಗಳನ್ನು ತಾವೇ ಕೈಯಾರೆ ಕೊಯ್ದು, ತುಂಡು ಮಾಡಿ ಗೋವುಗಳ ಬಾಯಿಗೆ ಕೊಟ್ಟು ಸಂಭ್ರಮಿಸಿದ್ದಾರೆ. ಬಿಸಿಲಿಗೆ ಬಳಲಿದ್ದ ಗೋವುಗಳು ಈ ಸಿಹಿ ನೀರಿನ ಹಣ್ಣುಗಳನ್ನು ತಿಂದು ಖುಷಿಪಟ್ಟಿವೆ.
ಇದೊಂದು ಅಪರೂಪದ ಯುವಕರ ತಂಡ. ರಘುನಂದನ್ ಹೆಬ್ಬಾರ್ ಎಂಬವರ ನೇತೃತ್ವದಲ್ಲಿ, ಈ ತಂಡ ಗೋ ಸೇವೆ ನಡೆಸುತ್ತಿದೆ. ಯುಗಾದಿ ಗೋಪಾರ್ಟಿ ಹೆಸರಲ್ಲಿ, ಗೋವುಗಳಿಗೆ ಕಾಲಕಾಲಕ್ಕೆ ತಿನ್ನಲು ಕೊಡುತ್ತಾ ಬಂದಿದ್ದಾರೆ. ನೀಲಾವರ ಗೋಶಾಲೆಯೂ ಸೇರಿದಂತೆ ಪರಿಸರದ ಹತ್ತಾರು ಗೋಶಾಲೆ ಗಳಿಗೆ ಈ ತಂಡ ಭೇಟಿ ನೀಡುತ್ತದೆ. ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿ ವಾಪಸ್ ಬರುತ್ತದೆ.

ಪ್ರತಿಯೊಬ್ಬರೂ ಕೂಡ ಗೋಸೇವೆ ನಡೆಸಬೇಕು ತಿಂಗಳ ಗಳಿಕೆಯಲ್ಲಿ ಒಂದು ಸಣ್ಣ ಮೊತ್ತವನ್ನು ಪರಿಸರದಲ್ಲಿ ಅಡ್ಡಾಡುವ ಗೋವುಗಳ ಹಿತರಕ್ಷಣೆಗೆ ಬಳಸಬೇಕು ಎನ್ನುವುದು ಇವರ ಆಶಯವಾಗಿದೆ. ಅಕ್ರಮ ಸಾಗಾಟದ ವೇಳೆ ಸಿಕ್ಕಿ ಬಿದ್ದ ಅನಾಥ ಹಸುಗಳಿಗೆ ನೀಲಾವರ ಗೋಶಾಲೆ ಆಶ್ರಯ ತಾಣವಾಗಿದೆ. ಪಾರ್ಟಿ ಹೆಸರಲ್ಲಿ ಮೋಜು ಮಸ್ತಿ ಮಾಡುವ ಜನರು ಈ ರೀತಿಯ ಗೋಪಾರ್ಟಿ ನಡೆಸಿದರೆ, ಮನಸ್ಸಿಗೂ ಸಂತೋಷ ಗೋವುಗಳಿಗೂ ಹಸಿವು ನೀಗುತ್ತದೆ.












Click it and Unblock the Notifications