ಉಡುಪಿ ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ: ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಮೇ 26: ಅಪ್ರಾಪ್ತ ವಯಸ್ಕರನ್ನು ಪೀಠಾಧಿಪತಿಗಳನ್ನಾಗಿ ಮಾಡಿದರೆ ಸರಕಾರ ಸುಮ್ಮನೆ ಕೂರಬಾರದು ಎಂದು ಕರ್ನಾಟಕ ಉಚ್ಚನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಉಡುಪಿ ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ ವಿಚಾರದಲ್ಲಿ ಹಿಂದಿನ ಕೃಷ್ಣೈಕ್ಯರಾದ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮತ್ತು ಶ್ರೀನಿವಾಸ ಆಚಾರ್ಯ ಅವರು, ಹದಿನಾರು ವರ್ಷದ ಬಾಲಕನ್ನು ಪೀಠಾಧಿಪತಿಯನ್ನಾಗಿ ಮಾಡಿದ್ದು ತಪ್ಪು ಎಂದು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ, ಅಪ್ರಾಪ್ತ ಬಾಲಕನನ್ನು ಪೀಠಾಧಿಪತಿಯನ್ನಾಗಿ ಮಾಡಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.

"ಅಪ್ರಾಪ್ತ ವಯಸ್ಕನನ್ನು ಸನ್ಯಾಸಿಯಾಗುವಂತೆ ಬಲವಂತ ಮಾಡಿದರೆ, ಅವನ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಮನವಿಯಲ್ಲಿ ಕೆಲವು ತಿದ್ದುಪಡಿ ಮಾಡಲು ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ"ಎಂದು ಹೈಕೋರ್ಟ್ ವಿಭಾಗೀಯ ಪೀಠ ಪ್ರಕರಣದ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರಾದ ಡಿ.ಆರ್. ರವಿಶಂಕರ್ ವಾದ ಮಂಡಿಸಿ, 16 ವರ್ಷದ ಬಾಲಕನನ್ನು ಪೀಠಾಧಿಪತಿಯಾಗಿ ನೇಮಕ ಮಾಡಲಾಗಿದೆ. ಬಲವಂತವಾಗಿ ಸನ್ಯಾಸಿ ಮಾಡಲಾಗಿದೆ. ಪ್ರಕರಣದಲ್ಲಿ ಅಪ್ರಾಪ್ತರ ಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವ ವಾದವನ್ನು ಮಂಡಿಸಿದ್ದರು.
ಉಡುಪಿ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದಿಂದ ಸರಿಸುಮಾರು ಎರಡು ವರ್ಷಗಳಿಂದ ತೆರವಾಗಿರುವ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ವೇದವರ್ಧನ ತೀರ್ಥರನ್ನು ನೇಮಿಸಲಾಗಿತ್ತು.












Click it and Unblock the Notifications