ಉಡುಪಿ ರಾಮ ಭಕ್ತರ ಅಳಿಲು ಸೇವೆ: ಅಶಕ್ತರಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ
ಉಡುಪಿ, ಜನವರಿ 24: ಭಾರತದ ರಾಮ ಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ರಾಮದೇವರ ಪ್ರತಿಷ್ಠಾಪನೆಯಾಗಿದೆ. ಇನ್ನು ರಾಮ ರಾಜ್ಯದ ಕನಸು ನನಸಾಗಬೇಕು. ಹಾಗಾಗಿ ಸಾಧ್ಯವಾದಷ್ಟು ತಮ್ಮ ಊರಿನ ಬಡವರಿಗೆ ಮನೆ ಕಟ್ಟಿಸಿ ಕೊಡಿ ಎಂದು ಪೇಜಾವರ ಶ್ರೀ ಕರೆ ನೀಡಿದ್ದರು.
ಶ್ರೀಗಳ ಕರೆಗೆ ಓಗೊಟ್ಟು ರಾಮ ಭಕ್ತರ ಯುವಕರ ತಂಡ ಬಡ ಕುಟುಂಬಕ್ಕೆ ಸುಂದರ ಮನೆ ನಿರ್ಮಾಣ ಮಾಡಿ ಮನೆ ಮಂದಿಯ ಮೊಗದಲ್ಲಿ ಹರ್ಷ ತರಿಸಿದೆ. ಶ್ರೀರಾಮನಿಗೆ ಒಂದು ಸುಂದರ ಮಂದಿರ ಕಟ್ಟುವುದು ಇಂದು ನಿನ್ನೆಯ ಕನಸ್ಸಲ್ಲ 500 ವರ್ಷಗಳ ತಪಸ್ಸು ಅದು. ಅಯ್ಯೊಧೆಯಲ್ಲಿ ರಾಮ ಮಂದಿರ ಹೋರಾಟದಲ್ಲಿ ನಡೆದ ತ್ಯಾಗ ಬಲಿದಾನ ಅಗಣಿತ.

ರಾಮಲಲ್ಲಾ ಮಂದಿರ ಪ್ರಾಣ ಪ್ರತಿಷ್ಠಾಪನೆ ಕ್ಷಣದಲ್ಲಿ ಉಡುಪಿ ಪೇಜಾವರ ಮಠ ವಿಶ್ವಪ್ರಸನ್ನ ತೀರ್ಥರು, ರಾಮನಿಗೆ ಮಂದಿರ ನಿರ್ಮಾಣವಾಗಿದೆ. ರಾಮ ರಾಜ್ಯ ಕನಸು ಇಂತಹ ಸಂದರ್ಭಗಳಲ್ಲಿ ನನಸು ಮಾಡುವ ಪ್ರಯತ್ನ ಮಾಡಬೇಕು. ಬಡವರ ನೊಂದವರ ಪಾಲಿಗೆ ಬೆಳಕು ಆಗಬೇಕು ಎನ್ನುವ ಕರೆ ನೀಡಿದರು.
ಈ ಕರೆಗೆ ಓಗೊಟ್ಟು ಉಡುಪಿಯ ಮೂಡುತೋನ್ಸೆ ಪರಿಸರದ 30 ರಾಮಭಕ್ತ ತಂಡ ಕಾರ್ಯ ಪ್ರವೃತ್ತಾರಾಗಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ವೃದ್ಧ ಕೂಲಿ ಕಾರ್ಮಿಕನಿಗೆ ಸುಸಜ್ಜಿತ ಮನೆ ಕಟ್ಟಿಸಿದ್ದಾರೆ. ರಾಮ ರಾಜ್ಯದ ಕನಸು ನನಸು ಮಾಡುವ ಪ್ರಯತ್ನದ ಫಲವಾಗಿಯೇ ಈ ಸುಂದರ ಮನೆ ತಲೆಎತ್ತಿ ನಿಂತಿದೆ. 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡಲಾಗಿದೆ. ಅಯ್ಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಟೆ ಸಮಯದಲ್ಲಿ ಮನೆಯನ್ನು ವೃದ್ಧ ಕೂಲಿ ಕಾರ್ಮಿಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಮೂಡುತೋನ್ಸೆಯಲ್ಲಿ ನೆರೆಪೀಡಿತ ಪ್ರದೇಶದಲ್ಲಿ ನಿರ್ಗತಿಕ ಸ್ಥಿತಿಯಲ್ಲಿ ಗುಡಿಸಲಿನಲ್ಲಿ ವೃದ್ಧರಾದ ಬೋಂಗ್ರ ಬೆಲ್ಚಡಾ ಮತ್ತು ಅವರ ತಂಗಿ ಜೀವನ ಸಾಗಿಸುತ್ತಿದ್ದರು. ತಾವು ಮಾಡಿದ ಕೂಲಿಯಲ್ಲಿ ಮನೆ ಕಟ್ಟಲಾಗದೆ ನೆಮ್ಮದಿಯ ದಿನಗಳನ್ನು ನೋಡಲಾಗದೆ ವೃದ್ಧ ಅಣ್ಣ ತಂಗಿ ದಿನ ಕಳೆಯುತ್ತಿದ್ದರು. ಇದನ್ನು ಗಮನಿಸಿದ ರಾಮಭಕ್ತ ಯುವಕರ ತಂಡ 15 ದಿನಗಳಲ್ಲಿ ಚಿಕ್ಕದ ಚೊಕ್ಕದಾದ ಸುಂದರ ಮನೆ ನಿರ್ಮಾಣ ಮಾಡಿದ್ದಾರೆ.
ಹಲವು ರಾಮಭಕ್ತ ದಾನಿ ಹಣಕಾಸಿ ಸಹಾಯ ಮಾಡಿದರೆ ಯುವಕ ತಂಡ ರಾತ್ರಿ ಹಗಲು ಶ್ರಮವಹಿಸಿ ಮನೆಯನ್ನು ನಿರ್ಮಿಸಿದ್ದಾರೆ. ಸುಸಜ್ಜಿತ ಮನೆಯ ಜೊತೆಗೆ ಟಿವಿ, ಮಂಚ, ಬೀರುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೊಂಗ್ರ ಬೆಲ್ಚಡ ಕುಟುಂಬದ ಮುಂದಿನ ಭವಿಷ್ಯಕ್ಜೆ ಎರಡು ಲಕ್ಷ ಹಣ ನೀಡಿ ಜೀವನ ಭದ್ರತೆ ಒದಗಿಸಿದ್ದಾರೆ. ಸರಿಯಾದ ಸೂರು ಇಲ್ಲದೆ ಮಳೆ ಬಿಸಿಲಿಗೆ ಹೈರಾಣಾದ ಬಡ ಕುಟುಂಬದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕ್ಷಣ ನಗುವಿನ ಹೊಸಬೆಳಕು ಮೂಡಿದೆ.
ಒಟ್ಟಿನಲ್ಲಿ ದೇಶ ಎಲ್ಲೆಡೆ ರಾಮ ನಾಮದ ಜಪದಲ್ಲಿ ರಾಮಭಕ್ತರು ಮೈ ಮರೆತಿದ್ದರೆ, ಉಡುಪಿ ಪಡುತೋನ್ಸೆಯ ಯುವಕರ ತಂಡ ರಾಮ ರಾಜ್ಯ ಕನಸು ನನಸು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ರಾಮಭಕ್ತ ಯುವ ಮನಸ್ಸುಗಳ ರಾಮನಿಗೆ ಅಳಿಲುಸೇವೆ ರೂಪದಲ್ಲಿ ಸಲ್ಲಿಕೆಯಾದರೂ. ಬಡಕುಟುಂದ ಪಾಲಿಗೆ ರಾಮನೇ ಒಲಿದು ಸಕಲೈಶರ್ಯವನ್ನು ಕರುಣಿಸಿದಂತಾಗಿದೆ.












Click it and Unblock the Notifications