ಉಡುಪಿ ಕಡೆಯವರು ತಿಳುವಳಿಕೆ ಇಲ್ಲದವರಾ? ಏನಿದು ಸಿಎಂ ವ್ಯಂಗ್ಯ?
Recommended Video

ಬೆಂಗಳೂರು, ಮಾರ್ಚ್ 19: ಬುದ್ದಿವಂತರ ಜಿಲ್ಲೆಯೆಂದೇ ಹೆಸರಾಗಿರುವ ಉಡುಪಿ ಜಿಲ್ಲೆಯ ಸಮಸ್ತ ನಾಗರೀಕರನ್ನು ಅವಮಾನಿಸುವ ಹೇಳಿಕೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದಾರೆ.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕೆಲಸ ಮಾಡೋಕೆ ನಾವು ಬೇಕು, ವೋಟು ಮಾತ್ರ ನರೇಂದ್ರ ಮೋದಿಗಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಭಾಗದ ಜನರಿಗೆ ತಿಳುವಳಿಕೆ ಕಮ್ಮಿ ಎಂದಿರುವ ಮುಖ್ಯಮಂತ್ರಿಗಳು ಶೈಕ್ಷಣಿಕವಾಗಿ, ಸಾಕ್ಷರತೆಯಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಸತತವಾಗಿ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವುದನ್ನು ಮರೆತಂತಿದೆ.
ಉಡುಪಿ ಭಾಗದ ಕೆಲವು ತಿಳುವಳಿಕೆಯಿಲ್ಲದವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದಿರುವ ಕುಮಾರಸ್ವಾಮಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಂಬಂಧ ಸಭೆ ನಡೆಸುವಾಗ, ಮೇಲಿನ ಮಾತನ್ನು ಹೇಳಿದ್ದಾರೆ.

ಗೌಡ್ರು, ಉಡುಪಿ ಭಾಗದಲ್ಲಿ ಜೆಡಿಎಸ್ ಬೆಳೆಸುವ ಕೆಲಸಕ್ಕೆ ಯಾಕೆ ಪ್ರಯತ್ನಿಸಲಿಲ್ಲ
ಜೆಡಿಎಸ್ ಪಕ್ಷಕ್ಕೆ ಮತ ಹಾಕಿದವರು ಮಾತ್ರ ತಿಳುವಳಿಕೆ ಉಳ್ಳವರು, ಇಲ್ಲದಿದ್ದವರು ದಡ್ಡರಾ? ಕರಾವಳಿ ಭಾಗದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೇ ಜನ ಮನ್ನಣೆ ನೀಡುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವುದು? ರಾಜ್ಯ ರಾಜಕೀಯದಲ್ಲಿ ಬಂಡೆಯಂತಿರುವ ದೇವೇಗೌಡ್ರು, ಉಡುಪಿ ಭಾಗದಲ್ಲಿ ಜೆಡಿಎಸ್ ಬೆಳೆಸುವ ಕೆಲಸಕ್ಕೆ ಯಾಕೆ ಪ್ರಯತ್ನಿಸಲಿಲ್ಲ ಎನ್ನುವ ಪ್ರಶ್ನೆ, ಮುಖ್ಯಮಂತ್ರಿಗಳ ಹೇಳಿಕೆಯಿಂದ ಎದುರಾಗಿದೆ.

ವೋಟು ಮಾತ್ರ ಬಿಜೆಪಿ, ನರೇಂದ್ರ ಮೋದಿಗಾ, ಸಿಎಂ ಪ್ರಶ್ನೆ
ಕೆಲಸ ಆಗಬೇಕಾದರೆ ಈ ಕುಮಾರಸ್ವಾಮಿ ಮತ್ತು ರೇವಣ್ಣ ಬೇಕು, ವೋಟು ಮಾತ್ರ ಬಿಜೆಪಿ, ನರೇಂದ್ರ ಮೋದಿಗೆ ಹಾಕುತ್ತೀರಾ ಎಂದು ಖಾರವಾಗಿ ನುಡಿದಿರುವ ಮುಖ್ಯಮಂತ್ರಿಗಳು, ಕಳೆದ ಒಂಬತ್ತು ತಿಂಗಳಲ್ಲಿ ಯಾರೂ ಮಾಡದಷ್ಟು ಕೆಲಸವನ್ನು ನಾವು ಮಾಡಿದ್ದೇವೆ. ಅನುದಾನ ಬಿಡುಗಡೆ ಮಾಡುವುದಕ್ಕೂ ಉಡುಪಿ ಜಿಲ್ಲೆಗೆ ಯಾವುದೇ ತಾರತಮ್ಯ ತೋರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೋಮು ಗಲಭೆ ಆಗದಂತೆ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲಾಗಿದೆ
ನಾನು ಸಿಎಂ ಆದ ನಂತರ ಕರಾವಳಿ ಭಾಗದಲ್ಲಿ ಸಣ್ಣ ಕೋಮು ಗಲಭೆ ಆಗದಂತೆ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲಾಗಿದೆ. ಕಳಸಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದವರು ನಾವು. ಲೋಕೋಪಯೋಗಿ ಇಲಾಖೆಯಿಂದ ಸಾಧ್ಯವಾದಷ್ಟು ಅನುದಾನವನ್ನು ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಿಗೆ ನೀಡಲಾಗಿದೆ. ಆದರೂ, ಅಲ್ಲಿನ ಜನ ಮೋದಿ..ಮೋದಿ.. ಅಂತಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ, ಸಿಎಂ ಎಚ್ಡಿಕೆ
ನಮ್ಮ ಕೆಲವು ನ್ಯೂನ್ಯತೆಗಳಿಂದ ಉಡುಪಿ-ಚಿಕ್ಕಮಗಳೂರು ಭಾಗದಲ್ಲಿ ನಮಗೆ ಹಿನ್ನಡೆಯಾಗಿದೆ. ಅದನ್ನೆಲ್ಲಾ ಸರಿಪಡಿಸಿಕೊಳ್ಳಲು ಒಂದು ಅವಕಾಶ ನೀಡಿ ಎಂದಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ನಾವು ಸ್ಪರ್ಧಿಸುತ್ತಿರುವ ಎಲ್ಲಾ ಎಂಟು ಕ್ಷೇತ್ರದಲ್ಲಿ ಜನರು ನಮಗೆ ಆಶೀರ್ವಾದ ಮಾಡಿದರೆ, ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಿಖಿಲ್ ಗೋ ಬ್ಯಾಕ್ ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು
ಶೋಭಾ ಗೋಬ್ಯಾಕ್ ಎನ್ನುವ ಚಳುವಳಿ ಉಡುಪಿಯಲ್ಲಿ ಆರಂಭವಾಗಿದೆ, ಈ ಬಗ್ಗೆ ನಾನೇನು ಮಾತನಾಡುವುದಿಲ್ಲ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿ, ಅಲ್ಲಿನ ಗ್ರೌಂಡ್ ರಿಪೋರ್ಟ್ ಅರಿತು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಿಖಿಲ್ ಗೋ ಬ್ಯಾಕ್ ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದಾಗ, ಎಲ್ಲೋ ಕೂತು ಇದನ್ನು ಟ್ರೆಂಡ್ ಮಾಡಲಾಗುತ್ತದೆ, ಮಂಡ್ಯದವರಿಗೂ ಇದಕ್ಕೆ ಸಂಬಂಧವೇ ಇರುವುದಿಲ್ಲ ಎನ್ನುವ ಮಾತನ್ನು ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications