ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಪರ್ಯಾಯ: ಪಲಿಮಾರು ಶ್ರೀಗಳ ವೈಭವದ ಪುರಪ್ರವೇಶ

|
Google Oneindia Kannada News

Recommended Video

ಉಡುಪಿಯ ಪರ್ಯಾಯ ಪುರ ಪ್ರವೇಶ ಭವ್ಯ ಸಮಾರಂಭ ಜನವರಿ 18, 2018 ರಂದು | Oneindia Kannada

ಉಡುಪಿ, ಜ 3: ಎರಡನೇ ಬಾರಿಗೆ ಶ್ರೀಕೃಷ್ಣಮಠದ ಸರ್ವಜ್ಞ ಪೀಠವನ್ನೇರಲಿರುವ ಪಲಿಮಾರು ಮಠ ಸಂಸ್ಥಾನದ 31ನೇ ಯತಿ ವಿದ್ಯಾಧೀಶ ತೀರ್ಥರ ಉಡುಪಿ ಪುರಪ್ರವೇಶ ಮತ್ತು ಪೌರ ಸನ್ಮಾನ ಕಾರ್ಯಕ್ರಮಕ್ಕೆ ಭವ್ಯವಾದ ತೆರೆಬಿದ್ದಿದೆ. ಎರಡು ವರ್ಷಕ್ಕೊಮ್ಮೆ ಕೃಷ್ಣಮಠದ ಪೂಜೆ ಮತ್ತು ಆಡಳಿತವನ್ನು ಹಸ್ತಾಂತರಿಸುವ ಪರ್ಯಾಯ ಮಹೋತ್ಸವ ಜನವರಿ ಹದಿನೆಂಟರಂದು ನಡೆಯಲಿದೆ.

ಪರ್ಯಾಯ ಪೂರ್ವಭಾವಿ ತೀರ್ಥಕ್ಷೇತ್ರಯಾತ್ರೆ ಮುಗಿಸಿ, ತಿರುಪತಿ ವೆಂಕಟೇಶ್ವರ ದರ್ಶನ ಪಡೆದ ಪಲಿಮಾರು ಶ್ರೀಗಳನ್ನು, ಪಲಿಮಾರಿನಿಂದ ಉಡುಪಿಯ ಜೋಡುಕಟ್ಟೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.

In Pics: ಉಡುಪಿ: ಪಲಿಮಾರು ಶ್ರೀಗಳಿಂದ ಪರ್ಯಾಯ ಪುರ ಪ್ರವೇಶ

ಇದೇ ಮೊದಲ ಬಾರಿಗೆ ಪಲಿಮಾರಿನಿಂದ ಉಡುಪಿಗೆ ಆಗಮಿಸುವ ದಾರಿ ಮಧ್ಯೆಯ ಊರುಗಳಾದ ಎರ್ಮಾಳು, ಉಚ್ಚಿಲ, ಕಾಪು, ಪಾಂಗಾಳ ಮತ್ತು ಕಟಪಾಡಿಯಲ್ಲಿ ಪಲಿಮಾರು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.

Udupi Paryaya Pura Pravesha of Vidhyadeesha Theertha Swamiji of Palimar Mutt

ಡಾ. ಮೋಹನ್ ಆಳ್ವರ ನೇತೃತ್ವದಲ್ಲಿ ಜೋಡುಕಟ್ಟೆಯಿಂದ ಆರಂಭವಾದ ಭವ್ಯ ಮೆರವಣಿಗೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 70ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ವಿವಿಧ ನಮೂನೆಯ ಕಲಾಪ್ರಕಾರಗಳು, ಮೂರು ಸಾವಿರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. ಜೋಡುಕಟ್ಟೆ- ತಾಲೂಕು ಆಫೀಸ್ - ಡಯನಾ ವೃತ್ತ -ಕೆ ಎಂ ಮಾರ್ಗ- ಸಂಸ್ಕೃತ ಕಾಲೇಜು- ಕನಕದಾಸ ರಸ್ತೆಯ ಮೂಲಕ ಮೆರವಣಿಗೆ ರಥಬೀದಿ ಪ್ರವೇಶಿಸಿತು.

ತಟ್ಟಿರಾಯ, ಹುಲಿ ವೇಷ ಕುಣಿತ, ನಗಾರಿ, ಡೊಳ್ಳುಕುಣಿತ, ವೀರಗಾಶೆ, ಸೃಷ್ಟಿಗೊಂಬೆ ಬಳಗ, ಚಿಲಿಪಿಲಿ ಗೊಂಬೆ, ಮಹಿಳಾ ಚೆಂಡೆ, ಕೇರಳದ ಚೆಂಡೆ, ಸಿಂಗಾರಿ ಮೇಳ, ನಂದಿಧ್ವಜ, ಪಕ್ಕಿನಿಶಾನೆ, ತುಳುನಾಡ ವಾದ್ಯ, ಲಂಬಾಣಿ, ಭಜನ ತಂಡಗಳು, ಉತ್ತರ ಕರ್ನಾಟಕದ ಹಗಲು ವೇಷ ಮುಂತಾದ ಸಾಂಸ್ಕೃತಿಕ - ಕಲಾ ವೈಭವ ಮೆರವಣಿಗೆಯಲ್ಲಿ ಸಾಗಿ ಬಂತು.

Udupi Paryaya Pura Pravesha of Vidhyadeesha Theertha Swamiji of Palimar Mutt

ವೈಭವದ ಶೋಭಾಯಾತ್ರೆಯ ಬಳಿಕ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಪಲಿಮಾರು ಶ್ರೀಗಳು, ನಂತರ ಕೃಷ್ಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಪಡೆದರು. ಇದಾದ ನಂತರ ರಥಬೀದಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಪಲಿಮಾರು ಶ್ರೀಗಳಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಿತು.

ಪುರ ಪ್ರವೇಶ ಮೆರವಣಿಗೆ ಮತ್ತು ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಉಡುಪಿ ಅಷ್ಠ ಮಠದ ವಿವಿಧ ಪೀಠಾಧಿಪತಿಗಳು, ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಬನ್ನಂಜೆ, ಮಾಜಿ ಶಾಸಕ ರಘುಪತಿ ಭಟ್ ಮುಂತಾದವರು ಭಾಗವಹಿಸಿದ್ದರು.

ಕೃಷ್ಣ ಮಠದ ಸಂಪ್ರದಾಯದಂತೆ ಪ್ರತೀ 2 ವರ್ಷಕ್ಕೊಮ್ಮೆ ಅಷ್ಠ ಮಠದ ಪೀಠಾಧಿಪತಿಗಳು ಕೃಷ್ಣ ಪೂಜಾ ಕೈಂಕರ್ಯದ ಅವಕಾಶವನ್ನು ಪಡೆಯುತ್ತಾರೆ. ಪಲಿಮಾರು ಶ್ರೀಗಳ ಪರ್ಯಾಯಕ್ಕೆ ಇನ್ನು 14 ದಿನಗಳು ಬಾಕಿಯಿದ್ದು ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ.

Udupi Paryaya Pura Pravesha of Vidhyadeesha Theertha Swamiji of Palimar Mutt

ತನ್ನ ಮೊದಲ ಪರ್ಯಾಯದಲ್ಲಿ ಚಿಣ್ಣರ ಸಂತರ್ಪಣೆ ಎಂಬ ಯೋಜನೆ ಆರಂಭಿಸಿ ರಾಜ್ಯಕ್ಕೇ ಮಾದರಿಯಾದ ಪಲಿಮಾರು ಶ್ರೀಗಳು ಈ ಬಾರಿ, 32 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಕೃಷ್ಣ ಗರ್ಭಗುಡಿಗೆ ಚಿನ್ನದ ಗೋಪುರವನ್ನು ನಿರ್ಮಿಸುವ ಸಂಕಲ್ಪವನ್ನು ತೊಟ್ಟಿದ್ದಾರೆ.

ದಾಖಲೆಯ ಐದು ಬಾರಿ ಪರ್ಯಾಯ ಪೀಠವನ್ನೇರಿದ್ದ ಪೇಜಾವರ ಶ್ರೀಗಳು ತಮ್ಮ ಪರ್ಯಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದರೂ ಸಿಎಂ ಬಂದಿರಲಿಲ್ಲ. ಈ ಬಾರಿಯಾದರೂ, ಮುಖ್ಯಮಂತ್ರಿಗಳು ಉಡುಪಿ ಪರ್ಯಾಯದಲ್ಲಿ ಭಾಗವಹಿಸುತ್ತಾರಾ ಕಾದು ನೋಡಬೇಕಿದೆ.

English summary
Udupi Paryaya "Pura Pravesha" of Vidhyadeesha Theertha Swamiji of Palimar Mutt. Paryaya is a religious ritual which takes place once 2 year in Sri Krishna Matha of Udupi. The pooja and administration of Krishna Matha is distributed among the Swamijis of Ashta Matha's established by Dvaitha philosopher Sri Madhvacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X