ಉಡುಪಿ ಪರ್ಯಾಯ 2024: ಈ ಬಾರಿಯ ಪರ್ಯಾಯ ಪೀಠ ಏರಲಿರುವ ಪುತ್ತಿಗೆ ಸುಗುಣೇಂದ್ರ ಶ್ರೀಗಳ ಜೀವನದ ಹಾದಿ
ಉಡುಪಿ, ಜನವರಿ 17: ಕೃಷ್ಣನೂರು ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ನಡೆಯುತ್ತಿದೆ. ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣವನ್ನು ಪುತ್ತಿಗೆ ಶ್ರೀ ಮಾಡಲಿದ್ದಾರೆ. ಶ್ರೀ ಸುಗುಣೇಂದ್ರತೀರ್ಥರ ನಾಲ್ಕನೇ ಪರ್ಯಾಯ ಉತ್ಸವಕ್ಕೆ ಉಡುಪಿ ಶ್ರೀಕೃಷ್ಣ ಮಠ ಸಜ್ಜಾಗಿದೆ.
ಪರ್ಯಾಯ ಪೀಠ ಏರಲಿರುವ ಪುತ್ತಿಗೆ ಸುಗುಣೇಂದ್ರ ಶ್ರೀಗಳ ಜೀವನದ ಹಾದಿಯ ಸರಳ ವಿವರಣೆ ಇಲ್ಲಿದೆ. ಪೂರ್ವಾಶ್ರಮದಲ್ಲಿ ಹಯವದನ ಆಚಾರ್ಯ ಎಂದು ಕರೆಯಲ್ಪಡುತ್ತಿದ್ದ ಸುಗುಣೇಂದ್ರ ಶ್ರೀಗಳು, ಸೆಪ್ಟೆಂಬರ್ 15, 1961ರಲ್ಲಿ ಉಡುಪಿ ಜಿಲ್ಲೆಯ ಮಣಿಯೂರು ಗ್ರಾಮದಲ್ಲಿ ಜನಿಸಿದರು.

ಶ್ರೀಮತಿ ಕಮಲಮ್ಮ ಮತ್ತು ಶ್ರೀ ಗೋವಿಂದ ಆಚಾರ್ಯ ದಂಪತಿಯ ಸುಪುತ್ರನಾಗಿ ಜನನ ಹೊಂದಿದರು. ಪ್ರಾಥಮಿಕ ಶಿಕ್ಷಣವನ್ನು ಕೆಮುಂಡೇಲು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ಬಾಲ್ಯದಿಂದಲೂ ಅತ್ಯಂತ ತೀಕ್ಷ್ಣವಾದ ಬುದ್ಧಿಶಕ್ತಿ, ಆಧ್ಯಾತ್ಮಿಕತೆಯತ್ತ ಒಲವನ್ನು ಹೊಂದಿದ್ದ ಶ್ರೀಗಳು ತನ್ನ 12ನೇ ವಯಸ್ಸಿನಲ್ಲೇ 30ನೇ ಪೀಠಾಧಿಪತಿಯಾಗುವ ಯೋಗ ಹೊಂದಿದರು.
ಶ್ರೀ ಪುತ್ತಿಗೆ ಮಠದ ಅಂದಿನ ಮಠಾಧೀಶರಾದ ಸುಜ್ಞಾನೇಂದ್ರ ಶ್ರೀಗಳಿಂದ ಯೋಗ್ಯ ಶಿಷ್ಯನ ಹುಡುಕಾಟ ಮಾಡಿದ್ದರು. ಯೋಗ್ಯ ಉತ್ತರಾಧಿಕಾರಿಗಾಗಿ ಹಲವೆಡೆ ಹುಡುಕಾಟ ನಡೆಸಿ ಸುಮಾರು 500 ಜಾತಕ ಪರಿಶೀಲನೆ ಮಾಡಿದ್ದರು. ಕೊನೆಗೂ ಯೋಗ್ಯ ಶಿಷ್ಯನ ಹುಡುಕಾಟ ಫಲವಾಗಿ ಲಭಿಸಿದ ಹಯವದನ ಆಚಾರ್ಯರನ್ನು ಸುಗುಣೇಂದ್ರ ಸ್ವಾಮೀಜಿ ಎಂಬ ನಾಮಾಂಕಿತದೊಂದಿಗೆ ಪುತ್ತಿಗೆ ಮಠದ ಉತ್ತರಾಧಿಪತಿಯಾಗಿ ನೇಮಿಸಿದರು.

ಏಪ್ರಿಲ್ 8, 1974ರಲ್ಲಿ ಸುಗುಣೇಂದ್ರ ತೀರ್ಥರಿಗೆ ಉತ್ತರಾಧಿಕಾರಿಯಾಗಿ ದೀಕ್ಷೆಯಾಯಿತು. ಪರಮಪೂಜ್ಯ ಶ್ರೀ ವಿದ್ಯಾಮಾನ್ಯ ತೀರ್ಥರಿಂದ ಆಧ್ಯಾತ್ಮಿಕ ಹಾಗು ಶೈಕ್ಷಣಿಕ ಶಿಕ್ಷಣ ಲಭಿಸಿದರೆ, 12 ವರ್ಷಗಳ ಕಾಲ ಗುರುಗಳ ಮಾರ್ಗದರ್ಶನದಲ್ಲಿ ವೇದ, ಉಪನಿಷತ್ತು ಅಧ್ಯಯನ ಮಾಡಿದರು. 18ನೇ ಜನವರಿ 1976-18ನೇ ಜನವರಿ 1978 ಮೊದಲ ಪರ್ಯಾಯ ನಡೆಸಿದರು. 15ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಸರ್ವಾಂಗ ಪೀಠಾರೋಹಣ ಹಾಗೂ ಪರ್ಯಾಯ ಪೂರ್ಣಗೊಳಿಸಿದರು.
ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ವಾಂಗ ಪೀಠಾರೋಹಣ ಮಾಡಿದ ಅತೀ ಕಿರಿಯ ಯತಿ ಎಂಬ ಹೆಗ್ಗಳಿಕೆ ಸುಗುಣೇಂದ್ರ ಶ್ರೀಗಳದ್ದು. 18ನೇ ಜನವರಿ 1992ರಲ್ಲಿ ಎರಡನೇ ಪರ್ಯಾಯ ಪಟ್ಟ ವನ್ನು ಏರಿದರು. ಮೂವತ್ತರ ಹರೆಯದಲ್ಲಿದ್ದಾಗ ಎರಡನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಿದರೆ, 18ನೇ ಜನವರಿ 2008ರಲ್ಲಿ ಮೂರನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದರು. ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ಮೂರನೇ ಪರ್ಯಾಯ ಪ್ರಸಿದ್ಧಿ ಪಡೆದಿತ್ತು.

ತಮ್ಮ ಪರ್ಯಾಯದ ಅವಧಿಯಲ್ಲಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಉಡುಪಿಯ ಮುಖ್ಯದ್ವಾರದಲ್ಲಿ ಸ್ವಾಗತ ಗೋಪುರ ನಿರ್ಮಾಣ, ಯಾತ್ರಾರ್ಥಿಗಳಿಗೆ ಇಂದ್ರಪ್ರಸ್ಥ ಅತಿಥಿ ಗೃಹ ನಿರ್ಮಾಣ, ಕೃಷ್ಣ ಮಠದ ಆವರಣದ ಬಳಿ ಗೀತಾ ಮಂದಿರ ನಿರ್ಮಾಣ, ಮೂರನೇ ಪರ್ಯಾಯದ ಅವಧಿಯಲ್ಲಿ ಕೃಷ್ಣ ಮಠಕ್ಕೆ ನವರತ್ನ ಖಚಿತ ರಥದ ಕೊಡುಗೆ ನೀಡಿದರು. ಪರ್ಯಾಯ ಅವಧಿಯಲ್ಲಿ ಅನ್ನಬ್ರಹ್ಮ ಭವನ ನಿರ್ಮಾಣ, ತಾರತಮ್ಯಕ್ಕೆ ಸೆಡ್ಡು ಹೊಡೆದು ಹಸಿವು ನೀಗಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು.
ಐದು ವರ್ಷಗಳ ಅವಧಿಗೆ ವಿಶ್ವ ಧರ್ಮ ಮತ್ತು ಶಾಂತಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಹಾಗೂ ಭಾರತ ಹಾಗೂ ವಿದೇಶಗಳ ಒಟ್ಟು 35 ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಮುಖ್ಯಸ್ಥರು ಪರ್ಯಾಯ ಪೀಠ ಏರಲಿರುವ ಸುಗುಣೇಂದ್ರ ಶ್ರೀಯವರದ್ದಾಗಿದೆ.












Click it and Unblock the Notifications