ಉಡುಪಿಯಲ್ಲಿ ಬೆಳಗಿನವರೆಗೂ ನಡೆಯಲಿದೆ ಪರ್ಯಾಯ ಮೆರವಣಿಗೆ: ಭಕ್ತರು ತಿಳಿಯಲೇಬೇಕಾದ ಸಂಗತಿ ಇಲ್ಲಿದೆ
ಉಡುಪಿ, ಜನವರಿ 17: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ, ಜಗಮಗಿಸುವ ದೀಪಾಲಂಕಾರದಿಂದ ಕೃಷ್ಣ ನಗರಿ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುತ್ತಿದೆ. ಪುತ್ತಿಗೆ ಶ್ರೀ ಸುಗುನೇಂದ್ರ ಶ್ರೀ ಪಾದರ ಪರ್ಯಾಯ ಮಹೋತ್ಸವ ಕಣ್ತುಂಬಿಕೊಳ್ಳಲು ಜನರು ಕಾತುರಾಗಿದ್ದಾರೆ.
ಮಧ್ಯ ರಾತ್ರಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಮೇಳೈಸಲಿರುವ ಕಲಾ ತಂಡಗಳು, ಬೆಳಗ್ಗಿನ ಜಾವ ಅರಳು ಗದ್ದುಗೆಯಲ್ಲಿ ನಡೆಯಲಿರುವ ದರ್ಬಾರ್ ಪರ್ಯಾಯ ಮಹೋತ್ಸವದ ಕೇಂದ್ರ ಬಿಂದುವಾಗಿದೆ. ನಾಡ ಹಬ್ಬ ಎಂದೇ ಕರೆಯಲ್ಪಡುವ ಉಡುಪಿ ಪರ್ಯಾಯದ ಮಹೋತ್ಸವ ವಿಜೃಂಭಣೆಯಿಂದ ಆರಂಭವಾಗಿದೆ. ಉಡುಪಿ ನಗರದ ಮೂಲೆ ಮೂಲೆಯಲ್ಲೂ ಪರ್ಯಾಯದ ಕಳೆ ಮೇಳೈಸುತ್ತಿದೆ.

ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆಯ ಶ್ರೀ ಸುಗನೇಂದ್ರ ಸ್ವಾಮೀಜಿಗಳು ಭವ್ಯ ಪಲ್ಲಕ್ಕಿ ಮೆರವಣಿಗೆ ಮೂಲಕ ಉಡುಪಿ ನಗರವನ್ನು ಪ್ರವೇಶ ಮಾಡುವುದೇ ಕಣ್ಣಿಗೆ ಹಬ್ಬವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಜಗತ್ತಿನ ಮೂಲೆ ಮೂಲೆಯಿಂದ ಬಂದಿರುವ ಜನರು ಕಾತುರರಾಗಿದ್ದಾರೆ.
ಪರ್ಯಾಯ ಹಬ್ಬ ಇಂದು ರಾತ್ರಿಯಿಂದಲೇ ಆರಂಭವಾಗಿದೆ. ನಾಳೆ ಬೆಳಗ್ಗಿನ ಜಾವ 1 ಗಂಟೆಯ ಹೊತ್ತಿಗೆ ಪುತ್ತಿಗೆ ಶ್ರೀ ಸುಗನೇಂದ್ರ ಶ್ರೀ ಪಾದರು, ಮಧ್ವಚಾರ್ಯರು ಸ್ಥಾಪಿಸಿದ ಕಾಪುವಿನ ದಂಡ ತೀರ್ಥದಲ್ಲಿ ಮಿಂದೆದ್ದು, ಭವ್ಯ ಮೆರವಣಿಗೆಯ ಮೂಲಕ ಉಡುಪಿ ನಗರವನ್ನು ಪ್ರವೇಶಿಸಲಿದ್ದಾರೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೂರಾರು ಕಲಾ ತಂಡಗಳು, ಸ್ತಬ್ಧ ಚಿತ್ರಗಳೊಂದಿಗೆ ಶ್ರೀ ಗಳಿಗೆ ಭವ್ಯ ಸ್ವಾಗತವನ್ನು ನೀಡಲಾಗುತ್ತದೆ

ಈ ಪರಮ ವೈಭವವೇ ಕಣ್ಣಿಗೆ ಹಬ್ಬ, ಬಳಿಕ ಅಲ್ಲಿಂದ ಮೆರವಣಿಗೆಯೂ ನಗರದ ಮುಖ್ಯ ರಸ್ತೆಯ ಮೂಲಕ ಶ್ರೀ ಕೃಷ್ಣ ಮಠವನ್ನು ಬೆಳಗ್ಗಿನ ಜಾವ ತಲುಪಲಿದೆ. ಬಳಿಕ ಕೃಷ್ಣ ಮಠದಲ್ಲಿ ಪೊಡವಿಗೊಡೆಯನ ಆಶೀರ್ವಾದ ಪಡೆದು ಸರ್ವಜ್ಞ ಪೀಠವನ್ನೇರುವ ಶ್ರೀಗಳು, ಮುಂದಿನ 2 ವರ್ಷಗಳ ಕಾಲ ಉಡುಪಿ ಶ್ರೀ ಕೃಷ್ಣ ದೇವರ ಪೂಜೆ ಹಾಗೂ ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ.
ಬಳಿಕ ಮಠದ ಆವರಣದಲ್ಲಿರುವ ರಾಜಾಂಗಣದಲ್ಲಿ ಶ್ರೀಗಳು ಅರಳು ಗದ್ದುಗೆಯ ದರ್ಬಾರ್ ನಡೆಸಲಿದ್ದು, ಇದು ಪರ್ಯಾಯದ ಕೇಂದ್ರ ಬಿಂದುವಾಗಿದೆ. ಈ ಸುಂದರ ಕ್ಷಣ ಕಣ್ತುಂಬಿಕೊಳ್ಳಲು ನೆರೆದ ಭಕ್ತಸ್ತೋಮ ಕಾತುರವಾಗಿರುತ್ತದೆ.
ಒಟ್ಟಿನಲ್ಲಿ ಪರ್ಯಾಯ ಮಹೋತ್ಸವ ಬೆಳಗ್ಗಿನ ಜಾವ ಆರಂಭವಾದರೂ ಕೂಡ ಈಗಾಗಲೇ ನಗರದ ಮೂಲೆ ಮೂಲೆಯಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದೆ. ಈ ಬಾರಿಯ ಉಡುಪಿ ಪರ್ಯಾಯ ವಿಶ್ವ ಗೀತಾ ಪರ್ಯಾಯವಾಗಿದ್ದು ಅನೇಕ ನಿರೀಕ್ಷೆಗಳಿಗೂ ಎಡೆ ಮಾಡಿಕೊಟ್ಟಿದೆ.












Click it and Unblock the Notifications