Udupi: ಕೊಲೆ ಮಾಡಿದ ಚಾಕುವನ್ನು ಮತ್ತೆ ಅಡುಗೆ ಮನೆಯಲ್ಲಿ ಇಟ್ಟಿದ್ದ ನಾಲ್ವರ ಹಂತಕ!
ಉಡುಪಿ, ನವೆಂಬರ್ 23: ಉಡುಪಿಯಲ್ಲಿ ನಾಲ್ವರ ಹತ್ಯೆಗೈದ ಆರೋಪಿ ಪ್ರವೀಣ್ ಚೌಗಲೇ ಹತ್ಯೆ ಮಾಡಿದ ಚೂರಿಯನ್ನು ಅಡುಗೆ ಮನೆಯಲ್ಲೇ ಇಟ್ಟು ಪತ್ನಿಗೆ ಸಂಶಯ ಬರದಂತೆ ವರ್ತಿಸಿದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ನಾಲ್ವರ ಹತ್ಯೆ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ಅರುಣ್, ಪ್ರವೀಣ್ ನಾಲ್ವರ ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದಾನೆ. ಪತ್ನಿಗೆ ಸಂಶಯ ಬರೆದ ಹಾಗೆ ಮನೆಯಲ್ಲಿ ಪ್ರವೀಣ್ ವರ್ತಿಸಿದ್ದಾನೆ. ಬುಧವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ.

ಆರೋಪಿ ಪ್ರವೀಣ್ ಹಾಗೂ ಆಯ್ನಾಜ್ ಎಂಟು ತಿಂಗಳಿಂದ ಪರಿಚಯವಿತ್ತು. ಇವರ ಮಧ್ಯೆ ಉತ್ತಮ ಸಂಬಂಧ ಇತ್ತು. ಪ್ರವೀಣ್ ತನ್ನ ದ್ವಿಚಕ್ರ ವಾಹನ ಬಳಸಲು ಆಯ್ನಾಜ್ ನೀಡಿದ್ದ. ಆದರೆ ಎರಡು ತಿಂಗಳಿಂದ ಮಾತಾಡುತ್ತಿರಲಿಲ್ಲ. ಪ್ರವೀಣ್ ಕೊಲೆ ಮಾಡುವ ದಿನ ತನ್ನ ಕಾರ್‌ಅನ್ನು ಪಡುಬಿದಿರೆ ಟೋಲ್ ಹಿಂದೆ ನಿಲ್ಲಿಸಿದ್ದ.
ಕೃತ್ಯ ಮಾಡಲು ಚಾಕುವನ್ನು ತನ್ನ ಮನೆಯ ಅಡುಗೆಕೋಣೆಯಿಂದಲೇ ತಂದಿದ್ದ. ಮೊದಲು ಆಯ್ನಾಜ್ ಕೊಂದು ನಂತರ ತಾಯಿ ಅಕ್ಕ ಹಾಗೂ ತಮ್ಮನನ್ನು ಕೊಂದಿದ್ದ. ಕೊಲೆಗೆ ಬಳಸಿದ್ದ ಬಟ್ಟೆಯನ್ನು ಹೊತ್ತಿಸಿದ್ದ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ಹೆಂಡತಿ ಜೊತೆ ಬೆಳಗಾವಿ ಹೋಗಿದ್ದ. ಲೋಕೇಷನ್ ಹಾಕಲು ಆನ್‌ಲೈನ್‌ಗೆ ಬಂದ ಸಂದರ್ಭದಲ್ಲಿ ಆತನನ್ನು ಸೆರೆ ಹಿಡಿದಿದ್ದೇವೆ ಎಂದು ಎಸ್ಪಿ ಅರುಣ್ ಕೆ ಹೇಳಿದ್ದಾರೆ.
ಪ್ರವೀಣ್, ಆಯ್ನಾಜ್‌ನನ್ನು ಮಾತ್ರ ಕೊಲೆ ಮಾಡಲು ಬಂದಿದ್ದ. ಆದರೆ ಇತರರು ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲರನ್ನೂ ಕೊಂದಿದ್ದಾನೆ. ಕೊಲೆ ಮಾಡಿದ ಬಳಿಕ ಪ್ರವೀಣ್‌ಗೆ ಆಶ್ರಯ ನೀಡಿದ ಮನೆಯವರನ್ನು ತನಿಖೆ ಮಾಡಿದ್ದೇವೆ. ಪ್ರವೀಣ್‌ಗೆ ಆಶ್ರಯ ನೀಡಿದವರು ಪತ್ನಿ ಸಂಬಂಧಿಕರು ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ನಾವು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. 2007 ಪೂನಾ ಪೊಲೀಸ್ ಆಗಿದ್ದ. ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದಾನೆ. ಅಮಲು ಪದಾರ್ಥ ಸೇವನೆ ಮಾಡಿದ್ದನೋ ಎಂಬ ಬಗ್ಗೆ ಮೆಡಿಕಲ್ ರಿಪೋರ್ಟ್ ಬರಲಿದೆ. ಈ ಕೇಸ್ ಸಲುವಾಗಿ ಮೂರು ಪ್ರಕರಣ ದಾಖಲಾಗಿದೆ. ಉಡುಪಿ ನಗರದಲ್ಲಿ ಕೆಲವು ಕಡೆಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡುತ್ತೇವೆ. ಉಡುಪಿ ಮಂಗಳೂರಿನಲ್ಲಿ ಮಹಜರು ನಡೆಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.
ಕೊಲೆ ಮಾಡಿದ ಸಂಧರ್ಭದಲ್ಲಿ ಪ್ರವೀಣ್ ಕೈಗೆ ಗಾಯವಾಗಿತ್ತು. ಆದರೆ ಕೈಗೆ ಗಾಯವಾದ ಬಗ್ಗೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ಗಂಭೀರ ಪ್ರಕರಣ ಆಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಆಯ್ನಾಜ್‌ಗೆ ಬಾಡಿಗೆ ಮನೆ ಮಾಡಲು ಪ್ರವೀಣ್ ಸಹಾಯ ಮಾಡಿದ್ದಾನೆ. ಆಯ್ನಾಜ್ ಕುಟುಂಬದವರು ತನಿಖೆಗೆ ಸಹಾಯ ಮಾಡಿದ್ದಾರೆ. ಆರೋಪಿ ಪತ್ತೆಗೆ ಪೊಲೀಸ್ ತಂಡ ಒಳ್ಳೆಯ ಕೆಲಸ ಮಾಡಿದೆ. ಮಂಗಳೂರಿನಲ್ಲಿ ಪ್ರವೀಣ್‌ನನ್ನು ಅವೈಡ್ ಮಾಡಿದಕ್ಕೆ ಮನೆಗೆ ಬಂದು ಕೊಂದಿದ್ದಾನೆ. ಡಿಜಿ ಐಜಿಯವರು ತನಿಖೆ ಮಾಡಿದ ತಂಡಕ್ಕೆ ಬಹುಮಾನ ಘೋಷಣೆ ಮಾಡುತ್ತಾರೆ. 50ಕ್ಕೂ ಹೆಚ್ಚು ಪೊಲೀಸರು ತನಿಖಾ ತಂಡದಲ್ಲಿ ಇದ್ದರು. ತೃಪ್ತಿ ನಗರದಲ್ಲಿ ಮಹಜರು ವೇಳೆಯಲ್ಲಿ ಗಲಾಟೆ ಮಾಡುವ ಉದ್ದೇಶದಿಂದಲೇ ಗಲಾಟೆಯಾಗಿದೆ. ಹೀಗಾಗಿ ಮಹಜರಿನಲ್ಲಿ ಗಲಾಟೆಯಾಗಿದೆ .ಗಲಾಟೆ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಅರುಣ್ ಕೆ ಹೇಳಿದ್ದಾರೆ.












Click it and Unblock the Notifications