ಗೌಡ್ರು, ಎಚ್ಡಿಕೆ ತಂಗಿರುವ ರೆಸಾರ್ಟಿಗೆ ಉಡುಪಿ ಕೃಷ್ಣಮಠದ ಪ್ರಸಾದ ರವಾನೆ
ಉಡುಪಿ, ಮೇ 2: ನಗರದ ಹೊರವಲಯದ ಸಾಯಿರಾಧ ರೆಸಾರ್ಟಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಸಿಎಂ ಕುಮಾರಸ್ವಾಮಿಗೆ, ಉಡುಪಿ ಕೃಷ್ಣಮಠದಿಂದ ಆಮಂತ್ರಣ ಪತ್ರವನ್ನು ಕಳುಹಿಸಿಕೊಡಲಾಗಿದೆ.
ಕೃಷ್ಣಮಠದ ಸ್ವರ್ಣಗೋಪುರ ಉದ್ಘಾಟನೆಗೆ ಜೆಡಿಎಸ್ ವರಿಷ್ಠರನ್ನು ಮತ್ತು ಮುಖ್ಯಮಂತ್ರಿಗಳನ್ನು ಪರ್ಯಾಯ ಪಲಿಮಾರು ಮಠದ ಶ್ರೀಗಳು ಆಹ್ವಾನಿಸಿದ್ದು, ಜೂನ್ ಮೊದಲ ವಾರದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಗೌಡ್ರ ಮತ್ತು ಮುಖ್ಯಮಂತ್ರಿಗಳ ಪ್ರಕೃತಿ ಚಿಕಿತ್ಸೆಗೆ ಇಂದು ನಾಲ್ಕನೇ ದಿನವಾಗಿದ್ದು, ಉಡುಪಿ ಕೃಷ್ಣಮಠದಿಂದ ದಳಪತಿಗಳಿಗೆ ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಪ್ರಸಾದ ನೀಡಿದ ಮಠದ ಅಧಿಕಾರಿಗಳು, ಕೃಷ್ಣಮಠಕ್ಕೆ ಬರಲು ಆಹ್ವಾನ ನೀಡಿದ್ದಾರೆಂದು ತಿಳಿದುಬಂದಿದೆ.

ಕೃಷ್ಣಮಠಕ್ಕೆ ಅಕ್ಷಯ ತೃತೀಯದ ದಿನವಾದ ಮೇ ಏಳರಂದು ಬರುವುದಾಗಿ ದೇವೇಗೌಡ್ರು ಹೇಳಿದ್ದು, ಅಲ್ಲಿಯೇ ಪ್ರಸಾದ ಸ್ವೀಕರಿಸುವುದಾಗಿ ಮಠದ ಅಧಿಕಾರಿಗಳಿಗೆ ಹೇಳಿದ್ದಾರೆ.
ಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಸುವರ್ಣ ಕವಚ ಹೊದಿಸುವ ಕೆಲಸಕ್ಕೆ ಮಾರ್ಚ್ 13ರಂದು ಚಾಲನೆ ನೀಡಲಾಗಿತ್ತು. ಜೂನ್ ಮೊದಲ ವಾರದಲ್ಲಿ ಗೋಪುರದ ಕೆಲಸ ಸಂಪೂರ್ಣಗೊಳ್ಳಲಿದೆ.
800 ವರ್ಷದ ಹಳೆಯ ತಾಮ್ರದ ತಗಡನ್ನು ತೆಗೆದು ಮೇಲ್ಛಾವಣಿಗೆ ಸುವರ್ಣ ಕವಚ ಹೊದಿಸಲಾಗುತ್ತಿದೆ. 100 ಕೆಜಿ ಬಂಗಾರವನ್ನು ಛಾವಣಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ.












Click it and Unblock the Notifications