ಕಾರ್ಕಳದ ಅಪಾರ್ಟ್ಮೆಂಟ್‌ನಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರ ಸ್ಥಿತಿ ಗಂಭೀರ
ಉಡುಪಿ, ಜುಲೈ 28: ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟಕ್ಕೆ ಕಾರ್ಕಳದ ಜನತೆ ಬೆಚ್ಚಿ ಬಿದ್ದಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಆನೆಕೆರೆ ಸಮೀಪದ ಕೃಷ್ಣಾ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಆನೆಕೆರೆ ಸಮೀಪದ ಕೃಷ್ಣಾ ಅಪಾರ್ಟ್ಮೆಂಟ್‌ನಲ್ಲಿ ಭಾರೀ ಶಬ್ದದೊಂದಿಗೆ ಮನೆಯೊಂದರ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದ್ದು ಘಟನೆಯಲ್ಲಿ ಅಪಾರ್ಟ್ಮೆಂಟ್‌ನ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಮನೆಯ ಗೋಡೆಗಳು ಛಿದ್ರಗೊಂಡು ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೆರಂಪಳ್ಳಿ: ಮನೆಯೊಂದರ ಅಂಗಳದಲ್ಲಿ ಚಿರತೆ ಪ್ರತ್ಯಕ್ಷ
ಉಡುಪಿ: ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ಶುಕ್ರವಾರ (ಜು.27) ತಡರಾತ್ರಿ ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಬಂದ ಚಿರತೆಯ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲವು ದಿನಗಳಿಂದ ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಚಿರತೆ ಬಂದ ವೇಳೆ ನಾಯಿ ಎಷ್ಟೇ ಬೊಗಳಿದರೂ ಮನೆಯವರು ಹೊರಬಂದಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ಕಡಿಮೆಯಾಗಿತ್ತು. ಚಿರತೆ ಬಂದಿರಬಹುದು ಎಂದು ಮನೆಯವರು ಊಹಿಸಿದ್ದರು. ಬೆಳಗ್ಗೆ ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ ಕಂಡುಬಂದಿದೆ.

ಆದರೆ ಅಚ್ಚರಿ ಎಂಬಂತೆ ನಿನ್ನೆ ರಾತ್ರಿ ಕಣ್ಮರೆಯಾಗಿದ್ದ ನಾಯಿ ಬೆಳಿಗ್ಗೆ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ಈ ಘಟನೆ ಮಣಿಪಾಲ, ಪೆರಂಪಳ್ಳಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications