ಮಂಗಳೂರು ಸಮುದ್ರದಲ್ಲಿ ಭೂತಾಯಿ ಮೀನಿನ ಪ್ರವಾಹ
ಮಂಗಳೂರು, ನವೆಂಬರ್ 22 : ಮಂಗಳೂರು ಹೊರವಲಯದ ಉಳ್ಳಾಲ , ಸೊಮೇಶ್ವರ ಪರಿಸರದ ಜನರಿಗೆ ಮೀನಿನ ಸುಗ್ಗಿಯೋ ಸುಗ್ಗಿ . ಪರಿಸರದ ಬಹುತೇಕ ಎಲ್ಲರ ಮನೆಯಲ್ಲಿ ಭೂತಾಯಿ ಮೀನಿನ ಸಾರು, ಫ್ರೈ, ಪುಲಿಮುಂಚಿ. ಇದಕ್ಕೆ ಕಾರಣ ಈ ಪರಿಸರದ ಕಡಲ ಕಿನಾರೆಗೆ ಈ ಭೂತಾಯಿ ಮೀನು ಹೇರಳವಾಗಿ ಬಂದು ಬೀಳುತ್ತಿದೆ.
ಕರಾವಳಿಯಲ್ಲಿ ಭೂತಾಯಿ ಎಂದು ಕರೆಯಲ್ಪಡುವ ಈ ಮೀನುಗಳು ಗುಂಪು ಗುಂಪಾಗಿ ಉಳ್ಳಾಲದ ವರೆಗಿನ ಕಡಲ ಕಿನಾರೆ ಬಂದು ಬೀಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನಗಳಿಂದ ಈ ಘಟನೆ ನಡೆಯುತ್ತಿದೆ. ಆದರೆ ಇಂದು ಹೇರಳವಾಗಿ ಮೀನು ದಡಕ್ಕೆ ಬಂದು ಬಿದ್ದಿವೆ. ಇಂದು ಮುಂಜಾನೆ ಯಿಂದ ಸಮುದ್ರದ ದಡದಲ್ಲಿ ಈ ಅಪರೂಪದ ದೃಶ್ಯ ಕಂಡು ಬರುತ್ತಿದೆ.
ಭೂತಾಯಿ ಎಂದು ಕರೆಯುವ ಸಾರ್ಡಿನ್ ಮೀನುಗಳ ಗುಂಪು ಕಡಲದಡಿಗೆ ಬಂದಿದ್ದು, ರಾಶಿ ರಾಶಿ ಮೀನು ಕಡಲ ತೆರೆಗಳೊಂದಿಗೆ ಬರುತ್ತಿದ್ದು ಸ್ಥಳೀಯರು ಮೀನಿಗಾಗಿ ಮುಗಿಬಿದ್ದು ಹಿಡಿಯುತ್ತಿದ್ದಾರೆ. ಇಂತಹ ಘಟನೆ 6 ವರ್ಷಗಳ ಹಿಂದೆ ನಡೆದಿತ್ತು ಅನ್ನುತ್ತಾರೆ ಸ್ಥಳೀಯ ಮೀನುಗಾರರು. ಇನ್ನೂ ಕೆಲವರು ಇದು ಯಾವುದೋ ಅಪಾಯದ ಮುನ್ಸೂಚನೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ದೊಡ್ಡ ಮೀನುಗಳು ಬೇಟೆಗೆ ಮುಂದಾಗುವಾಗ ಗುಂಪಿನಲ್ಲಿ ಹೋಗುವ ಈ ಮೀನು ದಾರಿ ತಪ್ಪಿ ತೀರದ ದಿಕ್ಕು ಹಿಡಿದಾಗ ಕೊನೆಗೆ ತೆರೆಯ ಅಬ್ಬರಕ್ಕೆ ಸಿಲುಕಿ ಈ ರೀತಿಯಲ್ಲಿ ದಡಕ್ಕೆ ಬಂದು ಬೀಳುತ್ತವೆ ಎಂದು ಕೆಲವರ ವಾದ.
ಆದರೆ ಹುಚ್ಚನ ಮದುವೆಯಲ್ಲಿ ಉಂಡವನೆ ಜಾಣ ಎಂದು ಹೇಳುವ ಹಾಗೆ ನಂಬಿಕೆ , ಮೂಡ ನಂಬಿಕೆಯ ನಡುವೆ ತಾಜ ತಾಜ ಭೂತಾಯಿ ಮೀನು ಹಿಡಿದು ಮನೆಗೆ ಕೊಂಡು ಹೋಗಿ ಕರಿದು ತಿಂದವನೇ ಜಾಣ ಎನ್ನ ಬಹುದು.












Click it and Unblock the Notifications