ಮಲ್ಪೆ ಅಗ್ನಿಶಾಮಕ ದಳ ಊಟಕ್ಕಿಲ್ಲದ ಉಪ್ಪಿನಕಾಯಂತಾಗಿದ್ದೇಕೆ..? ಇಲ್ಲಿದೆ ಕಾರಣ
ಉಡುಪಿ, ಮೇ 24: ಕರಾವಳಿಯ ಜಿಲ್ಲೆಯಾದ ಉಡುಪಿಯಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೂ ಕೂಡ ಬೆಂಕಿ ಆಕಸ್ಮಿಕಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಈ ಬಾರಿ ಅತಿ ಹೆಚ್ಚು ಉಷ್ಣತೆ ಉಡುಪಿಯಲ್ಲಿ ದಾಖಲಾಗಿದ್ದು ಸಾಕಷ್ಟು ಅಗ್ನಿ ಅವಘಡಗಳು ಕೂಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಲ್ಪೆ ಬಂದರುನಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸಿದರೆ ತಕ್ಷಣಕ್ಕೆ ಉಪಯೋಗಕ್ಕೆ ಸಿಗಲಿ ಎನ್ನುವ ನಿಟ್ಟಿನಲ್ಲಿ ಅಗ್ನಿಶಾಮಕ ಘಟಕ ಒಂದು ಕಾರ್ಯನಿರ್ವಹಿಸುತ್ತಿದೆ. ಆದರೆ ಸದ್ಯ ಸಿಬ್ಬಂದಿ ಇದ್ದರೂ ಕೂಡ ಅಗ್ನಿಶಾಮಕ ಇಲಾಖೆ ಮಾತ್ರ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಇತ್ತೀಚಿಗೆ ಉಡುಪಿ ನಗರದಿಂದ ಸ್ವಲ್ಪ ದೂರದಲ್ಲಿರುವ ಮಲ್ಪೆ ಬಳಿ ಅಗ್ನಿ ಆಕಸ್ಮಿಕವನ್ನು ನಡೆದಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಅಗ್ನಿ ಆಕಸ್ಮಿಕ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಗಮನಿಸಿದ್ದಾರೆ. ಆದರೆ ಬೆಂಕಿ ನಂದಿಸಲು ಸೂಕ್ತ ವಾಹನದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಜೊತೆ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಬೇಕಾದ ಪ್ರಮೇಯ ಎದುರಾಯಿತು.
ಹಾಗಂತ ಮಲ್ಪೆಯಲ್ಲಿ ಅಗ್ನಿಶಾಮಕ ದಳದ ಘಟಕ ಇಲ್ಲ ಅಂತೇನಿಲ್ಲ. ಮಲ್ಪೆ ಬಂದರಿನ ಒಳಗಡೆ ಸರ್ವ ಸಜ್ಜಿತವಾದ ಅಗ್ನಿಶಾಮಕ ದಳದ ಕಚೇರಿ ಇದೆ. ವರ್ಷದ 365 ದಿನವೂ ಕೂಡ ದಿನದ 24 ಗಂಟೆಯೂ ಕೂಡ ಕರ್ತವ್ಯ ನಿರ್ವಹಿಸಲು ಶಕ್ತರಾಗಿರುವ ಸಿಬ್ಬಂದಿ ಕೂಡ ಇಲ್ಲಿದ್ದಾರೆ. ಆದರೆ ಈ ಅಗ್ನಿಶಾಮಕ ಘಟಕದಲ್ಲಿರುವ ಎರಡು ವಾಹನಗಳು ಕೂಡ ನಿಷ್ಪ್ರಯೋಜಕವಾಗಿದ್ದು ಎಲ್ಲಿಯಾದರೂ ಅಗ್ನಿ ಆಕಸ್ಮಿಕ ಸಂಭವಿಸಿದ ಕರೆ ಬಂದರೆ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿ ಕೂಡ ಮೇಲೆ ಕೆಳಗೆ ನೋಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಸುಮಾರು 2,500ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು ನೆಲೆ ಕಾಣುವ ಮಲ್ಪೆ ಬಂದರೆನ ಒಳಗಡೆ ಈ ಘಟಕವಿದ್ದು ಸದ್ಯ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ. ಘಟಕ ಪ್ರಾರಂಭವಾದಾಗ ಬಳಸುತ್ತಿದ್ದ ಅಗ್ನಿಶಾಮಕ ವಾಹನ ಸದ್ಯ ಗುಜರಿ ಹಂತ ತಲುಪಿದ್ದು ಬಾಗಿಲು ಕೂಡ ತೆಗೆಯಲಾರದ ಪರಿಸ್ಥಿತಿಯಲ್ಲಿದೆ.

ಇನ್ನು ಇನ್ನೊಂದು ವಾಹನ 15 ವರ್ಷಗಳ ಕಾಲ ಸೇವೆಗೆ ಸಿಕ್ಕಿದ್ದು, ಸದ್ಯ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಸರಕಾರ ಸೇವೆಯಿಂದ ಹಿಂದೆ ಪಡೆದಿದೆ. ಏಷ್ಯಾದ ಅತಿ ದೊಡ್ಡ ಸರ್ವರಿಗೂ ಮೀನುಗಾರಿಕಾ ಬಂದರು ಎನಿಸಿಕೊಂಡಿರುವ ಮಲ್ಪೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳಿವೆ. ಯಾವಾಗಲೂ ಸಣ್ಣ ಪುಟ್ಟ ಅಗ್ನಿ ಆಕಸ್ಮಿಕಗಳು ಸಂಭವಿಸುತ್ತದೆ ಇರುವ ಈ ಬಂದರಿನಲ್ಲಿ, ಅಗ್ನಿಶಾಮಕ ದಳದ ಘಟಕ ಅತಿ ಅಗತ್ಯ. ಆದರೆ ಈಗ ಅಗ್ನಿಶಾಮಕ ದಳದ ಘಟಕ ಬಿದ್ದರೂ ಕೂಡ ತುರ್ತು ಸಂದರ್ಭದಲ್ಲಿ ಬಳಸಲಾಗದ ಸ್ಥಿತಿಯಲ್ಲಿದೆ.
ಎಲ್ಲಿಯಾದರೂ ಬಂದರುನಲ್ಲಿ ನಿಲ್ಲಿಸಲಾಗಿರುವ ಬೋಟಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೆ ಬೆಂಕಿ ಆವರಿಸಿ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಂಭವವಿದೆ. ಹೀಗಾಗಿ ತಕ್ಷಣಕ್ಕೆ ಸರ್ವ ಸಚಿತವಾಗಿರುವ ವಾಹನವನ್ನು ಇಲ್ಲಿಗೆ ಬರುವಂತೆ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳಿಗೆ ನೀಡುವ ವ್ಯವಸ್ಥೆಗಳಂತೆ ಅಗ್ನಿಶಾಮಕ ದಳಕ್ಕೂ ಕೂಡ ಕಾರ್ಯಕರ್ತ ಕಲ್ಪಿಸಿದರೆ ಮಾತ್ರ ತುರ್ತು ಸಂದರ್ಭದಲ್ಲಿ ನೆರವಿಗೆ ಬರುವಂತಾಗುತ್ತದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications