ಸಹಿ ಹಾಕುವ ಮುನ್ನ ಎಚ್ಚರ: ಇದು ಅಮಾಯಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಕೇಸ್
ಉಡುಪಿ, ಮಾರ್ಚ್ 11: ಸಹಕಾರಿ ಸೊಸೈಟಿಯಲ್ಲಿ ಸದಸ್ಯತ್ವ ಕೊಡಿಸುತ್ತೇನೆ ಎಂದು ಹೇಳಿ ಅಮಾಯಕರ ಹೆಸರಲ್ಲಿ ಸಾಲ ಪಡೆದು ವಂಚಿಸಿರುವ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಯುವಕರ ತಂಡವೊಂದು ತಮ್ಮದೇ ಸ್ನೇಹಿತನಿಂದ ಮೋಸ ಹೋಗಿದ್ದಾರೆ. ಈ ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ, ಅಮಾನವೀಯವಾಗಿ ನಡೆದುಕೊಂಡಿರುವ ಸಹಕಾರಿ ಸೊಸೈಟಿ ಮೋಸ ಹೋದವರ ಮೇಲೆ ಮತ್ತೊಂದು ದಾವೆ ಹೂಡಿದೆ.
ಉಡುಪಿಯ ಬ್ರಹ್ಮಾವರದಲ್ಲಿ ಕಾರ್ಯಾಚರಿಸುತ್ತಿರುವ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಅಮಾಯಕ ಯುವಕರಿಗೆ ಮೋಸ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. 2019ರಲ್ಲಿ ಈ ಸೊಸೈಟಿಗೆ ಸದಸ್ಯತ್ವ ನೀಡುವುದಾಗಿ ಅಮಾಯಕ ಯುವಕರಿಂದ ಸಹಿ ಪಡೆಯಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಹಾಗೂ ಮೋಸ ಹೋದ ಯುವಕರ ಪರಿಚಿತರೇ ಸೇರಿ ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಸಹಿ ಪಡೆದದ್ದು ಸದಸ್ಯತ್ವ ಅರ್ಜಿಗಾದರೂ, ಸಹಿ ಮಾಡಿದವರ ಹೆಸರಲ್ಲಿ ನಕಲಿ ಸಾಲ ಪಡೆದು ಎಲ್ಲವನ್ನು ತಮ್ಮ ಅಕೌಂಟಿಗೆ ವರ್ಗಾಯಿಸಿಕೊಂಡಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ , ಹೆಂಗವಳ್ಳಿಯ ಯುವಕರು ಮೋಸ ಹೋದವರು. ಇವರಿಗೆ ಮೋಸ ಮಾಡಿದ್ದು ಅದೇ ಗ್ರಾಮದ ರಮೇಶ್ ನಾಯ್ಕ್ ಹಾಗೂ ಗಣೇಶ್ ಕುಮಾರ್ ಎನ್ನಲಾಗಿದೆ.
ಈ ಕುರಿತು ತನಿಖೆ ನಡೆದು, ಆರೋಪಿಗಳನ್ನು ಬಂಧಿಸಿ, ಸದ್ಯ ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗಿದೆ. ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಈ ನಡುವೆ ಸೊಸೈಟಿಯು ಅಮಾಯಕ ಯುವಕರಿಗೆ ಬೆಳಗಾವಿಯ ಸಹಕಾರಿ ದಾವಾ ಪಂಚಾಯಿತಿ ನ್ಯಾಯಾಲಯದಲ್ಲಿ, ದಾವೆ ಹೂಡಿದೆ. ಸಾಲ ಮರು ಪಾವತಿಸುವಂತೆ ನೋಟಿಸ್ ನೀಡಿದೆ. ಈ ಅಮಾನವೀಯ ನಡೆಯ ಬಗ್ಗೆ ನೊಂದ ಯುವಕರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.
ಕೆಲವರು ಸಾಲ ಸಿಗಬಹುದು ಎಂಬ ಆಸೆಯಲ್ಲಿ ಪತ್ರಗಳಿಗೆ ಸಹಿ ಮಾಡಿದ್ದರು. ಇನ್ನು ಕೆಲವರು ಭವಿಷ್ಯದಲ್ಲಿ ಸಾಲ ತೆಗೆದರಾಯಿತು ಎಂದು ಸದಸ್ಯತ್ವಕ್ಕೆ ಅರ್ಜಿ ಹಾಕಿದ್ದರು. ಆರೋಪಿಗಳು ಈ ಯುವಕರ ಅಮಾಯಕತೆಯನ್ನು ಬಳಸಿಕೊಂಡು, ಬೇಕು ಬೇಕಾದ ಪತ್ರಗಳಿಗೆ ಸಹಿ ಪಡೆದು ಎಲ್ಲರ ಹೆಸರಲ್ಲಿ ಸಾಲದ ಹಣ ತೆಗೆದುಕೊಂಡು ತಮ್ಮ ಖಾತೆಗೆ ವರ್ಗಾಯಿಸಿದ್ದರು. ಈ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಕೂಡ ಸಲ್ಲಿಸಲಾಗಿದೆ.
ಸದ್ಯ ಪಡೆದ ಸಾಲಕ್ಕೆ ಈಗ ಸಂತ್ರಸ್ತ ಯುವಕರಿಗೆ ಜಪ್ತಿ ನೋಟಿಸ್ ಬಂದಿದೆ. ಮೋಸ ಹೋದವರ ಪೈಕಿ 7 ಯುವಕರು ಪ್ರತಿಷ್ಠಾನದ ಮೊರೆ ಹೋಗಿದ್ದಾರೆ. ಇನ್ನೂ ಅನೇಕ ಮಂದಿಗೆ ವಂಚನೆಯಾಗಿದೆ. ನಕಲಿ ಸಾಲದ ಮೊತ್ತ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಯುವಕರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಸದ್ಯ ಖರ್ಚು ಮಾಡಿಕೊಂಡು ದೂರದ ಬೆಳಗಾವಿಗೆ ಹೋಗಿ ನ್ಯಾಯಾಲಯ ಅಲೆದಾಡುವುದು ಸಾಧ್ಯವಾಗದ ಮಾತು ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.












Click it and Unblock the Notifications