ಉಡುಪಿಯಲ್ಲಿ ಅಷ್ಟಮಿ ಸಂಭ್ರಮ: ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ, ವಿಟ್ಲ ಪಿಂಡಿ ಮಹೋತ್ಸವಕ್ಕೆ ಕ್ಷಣಗಣನೆ
ಉಡುಪಿ, ಸೆಪ್ಟೆಂಬರ್ 07: ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮೇಳೈಸಿದೆ. ಬುಧವಾರ ರಾತ್ರಿ 11.42 ಕ್ಕೆ ಶ್ರೀ ಕೃಷ್ಣ ನಿಗೆ ಅರ್ಘ್ಯ ಪ್ರದಾನಮಾಡಲಾಗಿದ್ದು, ಉಡುಪಿ ರಥಬೀದಿ ವಿಶ್ವ ಪ್ರಸಿದ್ಧ ವಿಟ್ಲಪಿಂಡಿ ಮಹೋತ್ಸವಕ್ಕೆ ಸಾಕ್ಷಿಯಾಗಲಿದೆ.
ಪರ್ಯಾಯ ಕೃಷ್ಣಾಪುರ ಸ್ವಾಮೀಜಿ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದ್ದಾರೆ. ಶ್ರೀ ಕೃಷ್ಣ ದೇವರಿಗೆ ವಿಶೇಷ ನೈವೇದ್ಯಗಳ ತಯಾರಿಯನ್ನು ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಮಾಡಿದ್ದರು. ಕೃಷ್ಣ ಜನ್ಮಾಷ್ಟಮಿಯ ಪೂಜೆ ನೈವೇದ್ಯ ತಯಾರಿಗೆ ಕಾಣಿಯೂರು ಸ್ವಾಮೀಜಿ ಸಹಕಾರ ನೀಡಿದ್ದರು. ಎಳ್ಳು, ಕಡಲೆ, ತಂಬಿಟ್ಟು, ಅರಳು, ಗೋಡಂಬಿಯ ಉಂಡೆ, ವಿಶೇಷ ಅಕ್ಕಿ ಚಕ್ಕುಲಿ ಶ್ರೀ ಕೃಷ್ಣ ದೇವರಿಗೆ ಅರ್ಪಣೆ ಮಾಡಲಾಗಿದೆ.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅರ್ಘ್ಯ ಪ್ರಧಾನದ ವೇಳೆ ಸ್ಪೀಕರ್ ಯು.ಟಿ ಖಾದರ್ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಮಧ್ವ ಸರೋವರದಲ್ಲಿ ಕಾಲು ತೊಳೆದು ಬಂದು ಖಾದರ್ ಶ್ರೀ ಕೃಷ್ಣನ ದರ್ಶನ ಮಾಡಿದ್ದಾರೆ. ಸ್ಪೀಕರ್ ಖಾದರ್‌ಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದು, ನಾಡಿಗೆ ಒಳಿತಾಗಲಿ ಎಂದು ಖಾದರ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶುಭ ಮುಹೂರ್ತದಲ್ಲಿ ಪರ್ಯಾಯ ಕೃಷ್ಣಪುರ ಮಠಾಧೀಶರು ಕೃಷ್ಣದೇವರಿಗೆ ಅರ್ಘ್ಯ ಪ್ರದಾನ ಮಾಡಿದ್ದಾರೆ. ಅರ್ಘ್ಯ ಪ್ರದಾನದ ಮೂಲಕ ಕೃಷ್ಣದೇವರ ಹುಟ್ಟನ್ನು ಸಂಭ್ರಮಿಸುವ ಆಚರಣೆ ಮಾಡಲಾಗಿದೆ. ಕೃಷ್ಣ ದೇವರ ಗುಡಿಯಲ್ಲಿ ಮತ್ತು ಗುಡಿಯ ಎದುರಿನ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರಧಾನ ಮಾಡಿದ್ದು, ಪರ್ಯಾಯ ಮಠಾಧೀಶ ವಿದ್ಯಾಸಾಗರ ತೀರ್ಥರಿಗೆ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರ ಸಾಥ್ ನೀಡಿದ್ದಾರೆ.
ಹಗಲಿಡಿ ಉಪವಾಸವಿದ್ದ ನೂರಾರು ಭಕ್ತರಿಂದಲೂ ಅರ್ಘ್ಯ ಪ್ರಧಾನ ಮಾಡಲಾಗಿದೆ. ಶಂಖದ ಮೂಲಕ ಹಾಲು ಹಾಗೂ ನೀರಿನ ಆರ್ಘ್ಯ ನೀಡಲಾಗಿದ್ದು, ಕೃಷ್ಣಮಠದ ತುಂಬಾ ನಿರಂತರ ಕೃಷ್ಣ ಜಪ ಮಾಡಲಾಗಿದೆ.

ಇಂದು ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದೆ. ಮಧ್ಯಾಹ್ನದದ ನಂತರ ನಡೆಯುವ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ..ಇಂದು ಬೆಳಗ್ಗಿನಿಂದಲೇ ಸಾವಿರಾರು ಜನರಿಗೆ ಭೋಜನ ಪ್ರಸಾದ ವಿತರಣೆ ನಡೆಯಲಿದೆ. ಅಲ್ಲದೇ ಅರ್ಘ್ಯ ಪ್ರಧಾನದ ವೇಳೆ ದೇವರಿಗೆ ಸಮರ್ಪಿಸಿದ ಉಂಡೆ ಚಕ್ಕುಲಿ ವಿತರಣೆಯೂ ನಡೆಯಲಿದೆ.
ಹುಲಿ ಕುಣಿತಕ್ಕೆ ರಕ್ಷಿತ್ ಶೆಟ್ಟಿ ಹೆಜ್ಜೆ
ಅಷ್ಟಮಿಯ ಪ್ರಯುಕ್ತ ಇಡೀ ಉಡುಪಿಯಲ್ಲಿ ಹುಲಿ ವೇಷದ ತಾಸೆಯ ಸದ್ದು ಮಾರ್ದನಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಿರಂತರವಾಗಿ ನಡೆಯುತ್ತಿದೆ. ಕಡಲ ತಟದಲ್ಲಿ ಹುಲಿ ಕುಣಿದ ಸಪ್ತ ಸಾಗರದಾಚೆ ಎಲ್ಲೋ ತಂಡ ಮಲ್ಪೆಯ ಕೂಳ ಪರಿಸರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ನಟ ರಕ್ಷಿತ್ ಶೆಟ್ಟಿ, ಹುಲಿ ಕುಣಿತದ ಬೀಟ್‌ಗೆ ಹೆಜ್ಜೆ ಹಾಕಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಫೇವರೆಟ್ ಹುಲಿ ಕುಣಿತವಾಗಿದ್ದು, ಉಡುಪಿಯಲ್ಲಿ ಅಷ್ಟಮಿ ಆಚರಣೆ ಪ್ರಯುಕ್ತ ಎಲ್ಲೆಲ್ಲೂ ಹುಲಿ ವೇಷಗಳ ತಂಡವೇ ಕಾಣಸಿಗುತ್ತದೆ. ಹುಲಿ ಕುಣಿತ ಸ್ಪರ್ಧೆಯಲ್ಲಿ ಹೆಜ್ಜೆ ಹಾಕಿ ರಕ್ಷಿತ್ ಶೆಟ್ಟಿ ತಂಡ ಖುಷಿ ಪಟ್ಟಿದೆ. ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತ್ ಕೂಡಾ ಹುಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.












Click it and Unblock the Notifications