ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪತ್ರಕರ್ತ ಬಂಧನ
ಉಡುಪಿ, ನವೆಂಬರ್ 29: ಶಾಲಾ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದಲ್ಲಿ ಪತ್ರಕರ್ತನನ್ನು ಪೊಲೀಸರು ಬಂಧಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರ ತಾಲೂಕು ಹೆಮ್ಮಾಡಿ ವ್ಯಾಪ್ತಿಯ ದಿನಪತ್ರಿಕೆಯೊಂದರ ಬಿಡಿ ವರದಿಗಾರ ಚಂದ್ರ ಕೆ. ಹೆಮ್ಮಾಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಸಮೀಪದ ಕಾಡಿನಲ್ಲಿ ಫೋಟೊ ತೆಗೆದು, ಸುದ್ದಿ ಮಾಡಲು ಸ್ಥಳೀಯರಲ್ಲಿ ನೆರವು ಕೇಳಿ, ದಾರಿಗಾಗಿ ಬಾಲಕನನ್ನು ಕರೆದೊಯ್ದು ಬಳಿಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲಿ ವಿಚಾರಿಸಿದಾಗಲೂ ಏನೂ ತಿಳಿಸಿರಲಿಲ್ಲ.
ಆ ಘಟನೆ ಬಳಿಕ ಬಾಲಕನಿಗೆ ನಡೆದಾಡಲೂ ಕಷ್ಟವಾಗುತ್ತಿತ್ತು. ಖಿನ್ನತೆಗೆ ಒಳಗಾಗಿದ್ದ ಮಗನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿ ವೈದ್ಯರು ಬಾಲಕನ ಆರೋಗ್ಯ ತಪಾಸಣೆ ಮಾಡಿದ್ದು, ಈ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕನ ಜೊತೆ ಆಪ್ತ ಸಮಾಲೋಚನೆ ನಡೆಸಿದ ಬಳಿಕ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕಾರ್ಯಪ್ರವೃತ್ತರಾದ ಪೊಲೀಸರು ಚಂದ್ರ ಕೆ. ಹೆಮ್ಮಾಡಿಯನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕನ ತಂದೆಯು ನೀಡಿದ ದೂರಿನ ಮೇರೆಗೆ ಬೈಂದೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications