ಕುಂದಾಪುರದಲ್ಲಿ "ಪಾಕಿಸ್ತಾನ್ ಜಿಂದಾಬಾದ್'; ದೇಶದ್ರೋಹ ಪ್ರಕರಣ ದಾಖಲು
ಉಡುಪಿ, ಮಾರ್ಚ್ 02: ಉಡುಪಿ ಜಿಲ್ಲೆಯ ಕುಂದಾಪುರದ ಮಿನಿ ವಿಧಾನ ಸೌಧದ ಒಳಗೆ ವ್ಯಕ್ತಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ನಿರಂತರವಾಗಿ ಘೋಷಣೆ ಕೂಗಿದ ಘಟನೆ ಇಂದು ನಡೆದಿದೆ. ಘೋಷಣೆ ಕೂಗಿದ ವ್ಯಕ್ತಿಯನ್ನು ಕೋಡಿ ನಿವಾಸಿ ರಾಘವೇಂದ್ರ ಗಾಣಿಗ (43) ಎಂದು ಗುರುತಿಸಲಾಗಿದೆ. ಈತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Recommended Video
ಇಂದು ಬೆಳಿಗ್ಗೆ ಸುಮಾರು 9.40ರ ಸುಮಾರಿಗೆ ರಾಘವೇಂದ್ರ ಗಾಣಿಗ ಕುಂದಾಪುರದ ಮಿನಿ ವಿಧಾನಸೌಧಕ್ಕೆ ಬಂದಿದ್ದಾರೆ. ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಪಾಕಿಸ್ತಾನ ಜಿಂದಾಬಾದ್ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕಾರಿಡಾರ್ ಉದ್ದಕ್ಕೂ ಕೂಗುತ್ತಾ ಸಾಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಕುಂದಾಪುರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಮಿನಿ ವಿಧಾನಸೌಧದ ಒಳಗೆ ಪ್ರವೇಶಿಸಿದ್ದು, ಅಲ್ಲಿಯೂ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಈ ಮಾಹಿತಿ ಪಡೆದ ಕುಂದಾಪುರ ತಹಶೀಲ್ದಾರ್ ರಾಘವೇಂದ್ರ ವಿರುದ್ಧ ದೂರು ನೀಡಿದ್ದು, ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ರಾಘವೇಂದ್ರ ವಿವಾಹಿತನಾಗಿದ್ದು, ಒಂದು ಮಗುವಿದೆ. ವಿದ್ಯಾವಂತರಾಗಿರುವ ರಾಘವೇಂದ್ರ, 8 ವರ್ಷಗಳ ಹಿಂದೆ ಕುಂದಾಪುರದ ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಪತ್ನಿ ಹಾಗೂ ಮಗುವನ್ನು ತ್ಯಜಿಸಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದಾರೆ.

"ಆರೋಪಿ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲು ಮಾಡಿದ್ದೇವೆ. ಸೆಕ್ಷನ್ 124a ಅಡಿ ಕೇಸು ದಾಖಲಾಗಿದೆ. ಆತನ ಮಾನಸಿಕ ಆರೋಗ್ಯದ ಬಗ್ಗೆ ಇನ್ನೂ ಮಾಹಿತಿ ಇಲ್ಲ. ವೈದ್ಯಕೀಯ ವರದಿ ಬಂದ ಬಳಿಕ ಮಾಹಿತಿ ನೀಡುತ್ತೇವೆ. ತನಿಖೆ ಮುಂದುವರೆಸಿದ್ದೇವೆ" ಎಂದಿದ್ದಾರೆ ಉಡುಪಿ ಎಎಸ್ ಪಿ ಕುಮಾರಚಂದ್ರ.












Click it and Unblock the Notifications