ನಾಳೆ ಉಡುಪಿಗೆ ನರೇಂದ್ರ ಮೋದಿ: ಹೇಗಿದೆ ಗೊತ್ತಾ ಸಿದ್ಧತೆ ?
Recommended Video

ಉಡುಪಿ, ಏಪ್ರಿಲ್ 30 : ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕ ಪ್ರವಾಸ ಮೇ ಒಂದರಿಂದ ಉಡುಪಿಯಿಂದ ಪ್ರಾರಂಭಗೊಳ್ಳುತ್ತಿದ್ದು, ಭಾರೀ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಪ್ರಧಾನಿಯವರು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.
ಮೇ ಒಂದರಂದು 2.50 ಕ್ಕೆ ಮೋದಿಯವರು ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಿ, ಅಲ್ಲಿಂದ ಸಮಾವೇಶದ ಸ್ಥಳಕ್ಕೆ ಬರಲಿದ್ದಾರೆ. ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಯಿಂದಲೇ ಪ್ರಾರಂಭಗೊಳ್ಳುತ್ತದೆ ಎಂದು ಜಿಲ್ಲಾ ಬಿಜೆಪಿ ಮಾಹಿತಿ ನೀಡಿದೆ. ಕರಾವಳಿ ಮತ್ತು ಆಸುಪಾಸಿನ ಜಿಲ್ಲೆಗಳ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.
ಬಿಸಿಲಿನಿಂದ ರಕ್ಷಣೆಗಾಗಿ ಇಡೀ ಮೈದಾನಕ್ಕೆ ಪೆಂಡಾಲ್ ಹಾಕುವ ಕಾರ್ಯ ನಡೆದಿದೆ. ಸಮಾವೇಶ ಸುಗಮವಾಗಿ ನಡೆಯಲು 10 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಶ್ರಮಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.

ಮೋದಿ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರು , ಮಾಜಿ ಸಿಎಂ ಯಡಿಯೂರಪ್ಪ ಸಹಿತ ರಾಜ್ಯ ನಾಯಕರ ದಂಡೇ ಉಡುಪಿಗೆ ಬರುತ್ತಿದೆ. ಜೊತೆಗೆ ಉಡುಪಿ ,ದಕ್ಷಿಣ ಕನ್ನಡ ,ಉತ್ತರ ಕನ್ನಡ ಶಿವಮೊಗ್ಗ , ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳ ಮುಖಂಡರು , ಅಭ್ಯರ್ಥಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ಇಡೀ ಉಡುಪಿ ನಗರವನ್ನು ಸಿಂಗರಿಸುವ ಕಾರ್ಯ ಇವತ್ತಿನಿಂದ ಪ್ರಾರಂಭವಾಗಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆದರೆ ಉಡುಪಿಗೆ ಬರುವ ಪ್ರಧಾನಿಯವರು ಕೃಷ್ಣಮಠಕ್ಕೆ ಭೇಟಿ ಕೊಡುತ್ತಾರಾ ಎಂಬ ಬಗ್ಗೆ ಇನ್ನೂ ಖಚಿತಗೊಂಡಿಲ್ಲ. ಭದ್ರತೆ ದೃಷ್ಟಿಯಿಂದ ಮೋದಿಯವರು ಕೃಷ್ಣಮಠಕ್ಕೆ ಹೋಗುವುದು ಕಷ್ಟ ಎನ್ನಲಾಗುತ್ತಿದೆ. ಪ್ರಧಾನಿಯವರ ವಿಶೇಷ ಭದ್ರತಾ ಅಧಿಕಾರಿಗಳು ಈಗಾಗಲೇ ಕೃಷ್ಣಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು , ಅವರು ಗ್ರೀನ್ ಸಿಗ್ನಲ್ ನೀಡಿದ್ರೆ ಕೃಷ್ಣಮಠಕ್ಕೆ ಭೇಟಿ ಕೊಡಬಹುದು.












Click it and Unblock the Notifications