ಉಡುಪಿ ಯುವಕನ ಸಾವಿಗೆ ರಾಜಕೀಯದ ಬಣ್ಣ; ಸ್ಥಳೀಯ ಬಿಜೆಪಿ ಯುವಕರ ಕೈವಾಡ?
ಉಡುಪಿ, ನವೆಂಬರ್ 11: ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆಗೆ ಈಗ ರಾಜಕೀಯ ಬಣ್ಣ ಬಂದಿದೆ. ಘಟನೆಯಲ್ಲಿ ಮೃತಪಟ್ಟ ಶ್ರೇಯಸ್ ಎಂಬ ಯುವಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಯಾನಿಯಾಗಿದ್ದು, ಮಗನನ್ನು ಸ್ಥಳೀಯ ಬಿಜೆಪಿ ಯುವಕರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ನವೆಂಬರ್ 5ರಂದು ಶ್ರೇಯಸ್ ಎಂಬ ಯುವಕ ಸಾವನ್ನಪ್ಪಿದ್ದ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯ ಸುರೇಶ್ ಸೇರ್ವೆಗಾರ್ ಎಂಬುವರ ಮಗ ಶ್ರೇಯಸ್ ತನ್ನ ಸ್ನೇಹಿತ ರಾಕೇಶ್ ಮತ್ತಿತರರ ಜೊತೆಗೆ ಮಡಿಸಾಲು ಹೊಳೆಯ ಬಳಿ ಬೈಕ್ ನಲ್ಲಿ ಹೋಗಿದ್ದ. ಅಲ್ಲಿ ರಾಕೇಶ್ ಸ್ನೇಹಿತರಾದ ಯೋಗೀಶ್ ಹಾಗೂ ಸದಾನಂದ ಎಂಬುವರು ಸೇರಿಕೊಂಡಿದ್ದರು. ಇವರೆಲ್ಲ ಒಟ್ಟಾಗಿ ಮೀನು ಹಿಡಿಯಲು ಮಡಿಸಾಲು ಹೊಳೆಗೆ ತೋಟೆ ಹಾಕಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ತೋಟೆ ಸ್ಫೋಟಗೊಂಡಿತ್ತು.
ಸ್ಫೋಟದಿಂದಾಗಿ ಶ್ರೇಯಸ್ ಮೃತಪಟ್ಟಿದ್ದಾನೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಂದಿದೆ. ಮೃತ ಯುವಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲಿಗ ಎಂಬುದು ಒಂದು ಕಡೆಯಾದರೆ, ಈ ಯುವಕನನ್ನು ಸ್ಥಳೀಯ ಬಿಜೆಪಿಯ ಯುವಕರು ಹೊಳೆ ಸಮೀಪ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂಬುದು ಮೃತನ ತಾಯಿಯ ನೇರ ಆರೋಪ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಾರದೊಳಗೆ ತನಿಖೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಮೋದ್ ಮಧ್ವರಾಜ್ ಎಚ್ಚರಿಕೆ ನೀಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ರಾಜಕೀಯ ಬಣ್ಣ ಪಡೆದುಕೊಂಡಿರುವ ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತದೋ ಕಾದು ನೋಡಬೇಕಿದೆ.












Click it and Unblock the Notifications