Santosh Suicide Case: ಕೆಎಸ್ ಈಶ್ವರಪ್ಪ ವಿರುದ್ಧ ಉಡುಪಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಏನಿದೆ?
ಸಚಿವ ಕೆಎಸ್ ಈಶ್ವರಪ್ಪ ಆಪ್ತ ಬಸವರಾಜ ಮತ್ತು ರಮೇಶ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಆರೋಪಿ ನಂ.1, ಸಚಿವರ ಆಪ್ತ ಬಸವರಾಜ್ A2 ಆರೋಪಿ,ಇನ್ನೋರ್ವ ಆಪ್ತ ರಮೇಶ್ A3 ಆರೋಪಿ ಎಂದು ಉಲ್ಲೇಖಿಸಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ಅ.ಕೃ : 56/2022 ಕಲಂ: 306 ಜೊತೆಗೆ 34 ಐ.ಪಿ.ಸಿ ಪ್ರಕಾರ ದೂರು ದಾಖಲಾಗಿದೆ. ಸಂತೋಷ್ ಸೋದರ ಸಂಬಂಧಿ ಪ್ರಶಾಂತ ಪಾಟೀಲ್ ನೀಡಿದ ದೂರಿನ ಹಿನ್ನೆಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಉಡುಪಿ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಏನೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
* ಕೃತ್ಯ ನಡೆದ ದಿನಾಂಕ: ದಿನಾಂಕ:11/04/2022 ರಂದು ರಾತ್ರಿ 11 ಗಂಟೆಯಿಂದ 12/04/2022ರ ಬೆಳಿಗ್ಗೆ 10:00 ಗಂಟೆ
* ತಕ್ಷೀರು ಸ್ಧಳ: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಶಾಂಭವಿ ಲಾಡ್ಜ್ ರೂಮ್ ನಂ 207
* ವರದಿ ದಿನಾಂಕ:13/04/2022 ರಂದು 02:20 ಗಂಟೆ
* ಪಿರ್ಯಾದುದಾರರು: ಶ್ರೀ ಪ್ರಶಾಂತ ಗೌಡಪ್ಪ ಪಾಟೀಲ ಪ್ರಾಯ: 42 ವರ್ಷ, ತಂದೆ: ಗೌಡಪ್ಪ, ವಾಸ: ಬಡಸ ಕೆ, ಎಚ್, ಗ್ರಾಮ, ಬೆಳಗಾವಿ ತಾಲೂಕು ಮತ್ತು ಜಿಲ್ಲೆ
* ಆರೋಪಿತರು: 1) ಕೆ.ಎಸ್. ಈಶ್ವರಪ್ಪ 2) ಬಸವರಾಜ್ 3) ರಮೇಶ 4) ಇತರರು

ಎಫ್‌ಐಆರ್‌ನಲ್ಲಿನ ಸಾರಾಂಶ:
ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೇಂದರೆ, ಸನ್ 2020-21ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಜರುಗುವ ಹಿನ್ನಲೆ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿಕೊಂಡು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಜಾತ್ರೆಯ ವಿಷಯ ತಿಳಿಸಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾನ್ಯರು ಮಾಡಿಕೊಡಬೇಕೆಂದು ಗ್ರಾಮಸ್ಥರು ಸಚಿವರಲ್ಲಿ ವಿನಂತಿಸಿಕೊಂಡಿರುತ್ತಾರೆ. ಆಗ ಸಚಿವ ಕೆ.ಎಸ್ ಈಶ್ವರಪ್ಪ, ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ನಾನು ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲಾ ಕೆಲಸ ಶುರು ಮಾಡಿ ಎಂದು ತಿಳಿಸಿದ್ದರು.
ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಿಂಡಲಗಾ ಇವರು ಸಂತೋಷ ಕ ಪಾಟೀಲ್ ಈತನಿಗೆ ಕೆಲಸ ಪ್ರಾರಂಭಿಸಲು ತಿಳಿಸಿರುತ್ತಾರೆ. ಅದರಂತೆ ಸಂತೋಷ್ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿರುತ್ತಾರೆ. ಸದ್ರಿ ಕಾಮಗಾರಿಗಳ ಬಿಲ್ ಗಾಗಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅನ್ನು ಹಲವು ಸಾರಿ ಭೇಟಿಯಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಬಿಲ್ಲನ್ನು ಮಂಜೂರು ಮಾಡಲು ವಿನಂತಿಸಿಕೊಂಡಿರುತ್ತಾರೆ. ಆದರೆ ಅವರೆಲ್ಲರೂ ಹಾಗೆ ಕೆಲಸ ಆಗುವುದಿಲ್ಲಾ 40 ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದ್ದರು.
ಕಮೀಷನ್ ವಿಚಾರಕ್ಕೆ ಸರ್ಕಾರಕ್ಕೆ ದೂರು:
ಈ ಕಮೀಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರ್ಕಾರಕ್ಕೆ ದೂರು ಸಲ್ಲಿಸಿರುತ್ತಾರೆ. ಅದೇ ರೀತಿ ಗುತ್ತಿಗೆದಾರರಾದ ಸಂತೋಷ ಕ ಪಾಟೀಲ್ ಮಾದ್ಯಮಗಳ ಮುಖೇನ ಮಾರ್ಚ್ ತಿಂಗಳಿನಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಇವರು 40 ಪರ್ಸೆಂಟ್ ಕಮೀಷನ್ ಗೆ ಬೇಡಿಕೆ ಇಟ್ಟಿದ್ದಾರೆಂದು ಮಾದ್ಯಮಗಳಲ್ಲಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಸಂತೋಷನು ತನ್ನ ಹೆಂಡತಿ ಜಯಾ ಹಾಗೂ ಫಿರ್ಯಾದುದಾರರ ಬಳಿ ಈ ವಿಷಯ ತಿಳಿಸಿರುತ್ತಾರೆ. ಸಂತೋಷರವರಿಗೆ ಪದೇ ಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈ ಕಾಮಗಾರಿಗಳ ಬಿಲ್ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಸಚಿವರು ಇವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು. ಇದೇ ಬಿಲ್ ಪಾಸ್ ಆಗದ ಕಾರಣ ಆರ್.ಡಿ.ಪಿ.ಆರ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ವಿಡಿಯೋ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ನ್ನು ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾದ್ಯಮಗಳ ಮುಖೇನ ವಿಷಯ ಪ್ರಸ್ತಾಪಿಸಿರುತ್ತಾರೆ.
ಕೇಂದ್ರದ ನಾಯಕರಿಗೂ ದೂರು ಸಲ್ಲಿಕೆ:
ಸಂತೋಷ ಈತನು ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ಹಾಕಿದ್ದರಿಂದ ಅಡಚಣೆಯಾಗಿ 40 ಪರ್ಸೆಂಟ್ ಕಮೀಷನ್ ವಿಷಯದ ಕುರಿತು ರಾಜ್ಯ ಬಿ.ಜೆ.ಪಿ ಉಸ್ತುವಾರಿಯಾದ ಶ್ರೀ ಅರುಣ ಸಿಂಗ್ ರವರಿಗೆ ಹಾಗೂ ದೆಹಲಿ ಮಟ್ಟದ ಬಿ.ಜೆ.ಪಿ ವರಿಷ್ಟರಿಗೆ ಪ್ರಧಾನ ಮಂತ್ರಿಗಳ ಕಛೇರಿಗೆ ಭೇಟಿ ನೀಡಿ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಲ್ ಪಾಸು ಮಾಡದ ಹಾಗೂ 40 ಪರ್ಸೆಂಟ್ ಕಮೀಷನ್ ಕುರಿತು ಮನವಿ ಸಲ್ಲಿಸಿದ್ದು ಇರುತ್ತದೆ. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ. ಅದೇ ವಿಷಯದಲ್ಲಿ ಸಂತೋಷ ಪಾಟೀಲ್ ಈತನು ಆರೋಪಿಗಳಾದ ಕೆ.ಎಸ್ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ಹಾಗೂ ಇತರರ ಬಿಲ್ಲನ್ನು ಮಂಜೂರು ಮಾಡದ ಕಾರಣ ಮನನೊಂದು ತನ್ನ ಮೊಬೈಲಿನಿಂದ ವಾಟ್ಸ್ ಅಫ್ ಮುಖೇನ ಡೆತ್ ನೋಟ್ ಸಂದೇಶವನ್ನು ಮಾದ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿ ದಿನಾಂಕ: 11/04/2022ರ ರಾತ್ರಿ ಸುಮಾರು 11-00 ಗಂಟೆಯಿಂದ ದಿನಾಂಕ: 12/04/2022 ರ ಬೆಳಿಗ್ಗೆ 10 ಗಂಟೆಯಲ್ಲಿ ಉಡುಪಿಯ ಶಾಂಭವಿ ಲಾಡ್ಜ್ ನ ರೂ ನಂಬ್ರ 207 ರಲ್ಲಿ ಅನುಮಾನಾಸ್ಪದ ಸಾವು ಆಗಿದ್ದು, ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿ ಆಗಿರುತ್ತದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ:
ಇನ್ನು ಹನ್ನೆರಡು ಗಂಟೆಯ ಬಳಿಕ ಉಡುಪಿಯ ಲಾಡ್ಜ್ ಗೆ ಶವದ ವೀಕ್ಷಣೆಗೆ ಬಂದ ಸಹೋದರ ಸಂಬಂಧಿಗಳು ಆಗಮಿಸಿದ್ದಾರೆ. ಶವ ಕಂಡುಬಂದು ದುಃಖತಪ್ತರಾಗಿ ಮಾತನಾಡಿದ ಕುಟುಂಬಿಕರು, ಈಶ್ವರಪ್ಪ ಮತ್ತು ಅವರ ಆಪ್ತ ಸಹಾಯಕರ ಬಂಧನದವರೆಗೆ ಶವ ಪಡೆಯುವುದಿಲ್ಲ. ನಮ್ಮ ಸಹೋದರನಿಗೆ ಅನ್ಯಾಯವಾಗಿದೆ ನ್ಯಾಯ ಕೊಡಿ ಅಂತಾ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ. ಬುಧವಾರ ಶವದ ಪಂಚನಾಮೆ ಡಿಐಜಿ ದೇವ ಜ್ಯೋತಿ ರೇ ಸೂಚನೆಯಂತೆ ನಿರ್ಧಾರ ಮಾಡಲಾಗಿದ್ದು, ಹಗಲು ಬೆಳಕಿನಲ್ಲೇ ಪಂಚನಾಮೆ ಮಾಡಲು ಐಜಿಪಿ ಸೂಚಿಸಿದ್ದಾರೆ. ಪಂಚನಾಮೆ ಪೂರ್ಣಗೊಂಡ ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ಸಂತೋಷ್ ಪಾಟೀಲ್ ಸಹೋದರ ಹೇಳಿಕೆ ಉಲ್ಲೇಖ:
ತಡರಾತ್ರಿ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂತೋಷ್ ಪಾಟೀಲ್ ಸಂಬಂಧಿಕರಾದ ಸುರೇಶ್ ಹಾಗೂ ಪ್ರಶಾಂತ್ ಪಾಟಿಲ್, ನನ್ನ ತಮ್ಮನಿಗೆ ನ್ಯಾಯ ಸಿಗಬೇಕು, ನ್ಯಾಯ ಸಿಗಬೇಕಾದರೆ ಡೆತ್ ನೋಟ್ ನಲ್ಲಿದ್ದವರು ಅರೆಸ್ಟ್ ಆಗಬೇಕು, ಈಶ್ವರಪ್ಪ ಸಹಿತ ಅವರ ಆಪ್ತರಾದ ಬಸವರಾಜ್ ಹಾಗೂ ರಮೇಶ್ ಬಂಧನವಾಗಬೇಕು, ಮೂವರನ್ನು ಅರೆಸ್ಟ್ ಮಾಡದಿದ್ದರೆ ನನ್ನ ಸಹೋದರನ ಮೃತದೇಹ ಕೊಂಡೊಯ್ಯಲ್ಲ, ಎಫ್ ಐ ಆರ್ ಆದ ಕೂಡಲೇ ಈಶ್ವರಪ್ಪ , ಬಸವರಾಜ್ ಹಾಗೂ ರಮೇಶ್ ಈ ಮೂವರನ್ನ ಬಂಧಿಸಬೇಕು. ಡೆತ್ ನೋಟ್ ನಲ್ಲೇ ಈಶ್ವರಪ್ಪ ಅವರಿಂದ ಅನ್ಯಾಯ ಆಗಿದೆ ಎಂದು ಇದೆ. ಬಸವರಾಜ್ ಹಾಗೂ ರಮೇಶ್ ನನ್ನ ತಮ್ಮನಿಗೆ ಕಿರುಕುಳ ಕೊಟ್ಟಿದ್ದಾರೆ. ಕೊಲೆ ಬೆದರಿಕೆ ಹಾಕಿಯೂ ಇರಬಹುದು ಧಮ್ಕಿಯೂ ಕೊಟ್ಟಿರಬಹುದು. ನಾಲ್ಕು ಕೋಟಿ ಹಣ ಬಿಡುಗಡಯಾಗಿಲ್ಲ. ಹೀಗಾಗಿ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಆಗಾಗ್ಗೆ ಹೇಳುತ್ತಿದ್ದ. 80 ರಿಂದ 90 ಬಾರಿ ಕಾಮಗಾರಿ ಹಣ ಬಿಡುಗಡೆಗಾಗಿ ಈಶ್ವರಪ್ಪ ಅವರಲ್ಲಿ ಸಂತೋಷ್ ಹೋಗಿದ್ದಾರೆ. ಸುದ್ದಿಗೋಷ್ಠಿಯಲ್ಲೂ ಅನ್ಯಾಯ ಆಗಿರುವ ಬಗ್ಗೆ ಸಂತೋಷ್ ಹೇಳಿಕೊಂಡಿದ್ದಾರೆ. ನಾಲ್ಕು ಕೋಟಿಯ ಕೆಲಸ ಮಾಡಿದ್ದೇನೆ ಹಣ ಬಂದಿಲ್ಲ 40 ಪರ್ಸೆಂಟ್ ಹಣ ಕೇಳುತ್ತಿದ್ದಾರೆ ಎಂದು ಹೇಳಿದ್ದ. ನಮಗೆ ಸರ್ಕಾರ ಅನ್ಯಾಯ ಮಾಡಿದೆ. ಕೂಡಲೇ ಡೆತ್ ನೋಟ್ ನಲ್ಲಿದ್ದವರು ಬಂಧನವಾಗಬೇಕು. ಅರೆಸ್ಟ್ ಆಗದಿದ್ದರೆ ನಾವು ಮೃತದೇಹ ಕೊಂಡೊಯ್ಯಲ್ಲ. ಸಂಜೆ ಬಂದು ನಮ್ಮಲ್ಲಿ ಪೊಲೀಸರು ಹೇಳಿಕೆ ತೆಗೆದುಕೊಳ್ಳುತ್ತಿದ್ದಾರೆ. ಈಗ ಎಫ್ ಐಆರ್ ದಾಖಲಿಸುತ್ತಿದ್ದೇವೆ ಕೂಡಲೇ ಆರೋಪಿಗಳು ಅರೆಸ್ಟ್ ಆಗಬೇಕು. ಅರೆಸ್ಟ್ ಆದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಸುತ್ತೇವೆ ಅಂತಾ ಹೇಳಿದ್ದಾರೆ ಎಂಬ ಅಂಶವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications