ಉಡುಪಿಯಲ್ಲಿ ಹೃದಯಾಘಾತದಿಂದ ಸತ್ತಿದ್ದ ವ್ಯಕ್ತಿಯಲ್ಲಿತ್ತು ಕೊರೊನಾ
ಉಡುಪಿ, ಮೇ 16: ಉಡುಪಿಯಲ್ಲಿ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಆ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.
ಮಹಾರಾಷ್ಟ್ರದಿಂದ ಹುಟ್ಟೂರು ಕುಂದಾಪುರ ತಾಲೂಕಿಗೆ ಆಗಮಿಸಿದ್ದ 54 ವರ್ಷದ ವ್ಯಕ್ತಿ ಎರಡು ದಿನದ ಹಿಂದೆ ಸಾವನ್ನಪ್ಪಿದ್ದ ಸುದ್ದಿ ಉಡುಪಿಯಲ್ಲಿ ಆತಂಕ ಹೆಚ್ಚಿಸಿತ್ತು. ಈ ವ್ಯಕ್ತಿ ಅನಾರೋಗ್ಯದಿಂದಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದು, ಮೇ 13ರಂದು ಸಂಜೆ ಹೃದಯಾಘಾತವಾಗಿತ್ತು. ನಂತರ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಮೇ 14ರ ಬೆಳಿಗ್ಗೆ ಮಣಿಪಾಲದ ಕೆಎಂಸಿಯಲ್ಲಿ ಅವರು ಸಾವನ್ನಪ್ಪಿದ್ದರು.
ಮಹಾರಾಷ್ಟ್ರದಿಂದ ಈ ವ್ಯಕ್ತಿ ಬಂದಿದ್ದ ಕಾರಣ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಆತನ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಮಹಾರಾಷ್ಟ್ರದಿಂದ ಉಡುಪಿಗೆ ಬಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಸಾವು: ಇಂದು ವರದಿ ನಿರೀಕ್ಷೆ
ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಎಂದು ಧೃಡಪಟ್ಟಿದ್ದು, ಚಿಕಿತ್ಸೆ ನೀಡಿದ ಕೆಎಂಸಿಯ ಕೆಲ ವೈದ್ಯರು, ಸಿಬ್ಬಂದಿಯನ್ನು ಇದೀಗ ಕ್ವಾರಂಟೈನ್ ನಲ್ಲಿರಿಸಲಾಗುವುದು ಎಂದು ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಕೋವಿಡ್ 19 ನಿಯಮಾವಳಿಯಂತೆಯೇ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.