ಯಕ್ಷಗಾನ ಕಲಿಯಲು ಉಡುಪಿಗೆ ಬಂದ ಉತ್ತರ ಭಾರತದ ವಿದ್ಯಾರ್ಥಿಗಳು
ಉಡುಪಿ, ಡಿಸೆಂಬರ್ 2: ಯಕ್ಷಗಾನ ಕರ್ನಾಟಕ ಕರಾವಳಿ ಭಾಗದ ಗಂಡು ಕಲೆ. ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನವು ದೂರದೂರುಗಳಲ್ಲೂ ಪ್ರಸಿದ್ಧಿ ಪಡೆದು, ವಿದೇಶದಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ. ಹೀಗಾಗಿ ಯಕ್ಷಗಾನದಂಥ ಶ್ರೇಷ್ಠ ಕಲೆಯನ್ನು ಕಲಿಯಬೇಕು ಅನ್ನುವ ಆಸಕ್ತಿಯಿಂದ ಉತ್ತರ ಭಾರತದವರು ಕರಾವಳಿಗೆ ಬಂದು ನಾಟ್ಯಾಭ್ಯಾಸ ಮಾಡುತ್ತಿದ್ದಾರೆ. ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ, ಹೆಜ್ಜೆ ಹಾಕುವುದಕ್ಕೆ ತಯಾರಾಗುತ್ತಿದ್ದಾರೆ.
ಹಿಂದೆ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನ ಈಗ ಸಾಗರದಾಚೆಗೂ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿದೆ. ವಿದೇಶದಲ್ಲೂ ಚೆಂಡೆ ಸದ್ದು ಕೇಳುವಂತಾಗಿದೆ. ಹೀಗಾಗಿ ಇಂತಹ ವಿಶಿಷ್ಟ ಕಲೆಯನ್ನು ತಾವು ಕರಗತ ಮಾಡಿಕೊಳ್ಳಬೇಕು ಎಂದು ಉತ್ತರ ಭಾರತದ ಯುವಕ, ಯುವತಿಯರು ದಕ್ಷಿಣದ ಕರಾವಳಿಗೆ ಬಂದು, ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.
ಉಡುಪಿ ಯಕ್ಷಗಾನ ಕೇಂದ್ರಕ್ಕೆ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದಂತೆ ವಿವಿಧ ರಾಜ್ಯದ ವಿದ್ಯಾರ್ಥಿಗಳು ಬಂದು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಸಂಜೀವ ಸುವರ್ಣ ಅವರ ಮಾರ್ಗದರ್ಶನದಲ್ಲಿ ಒಟ್ಟು 14 ಮಂದಿ, ಒಂದು ತಿಂಗಳವರೆಗೆ ಉಚಿತ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ದೇಶದ ಆರೇಳು ರಾಜ್ಯಗಳ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ. ದೆಹಲಿ, ಲಕ್ನೋ, ಪುಣೆ, ಚೆನೈ, ಸಿಕ್ಕಿಂ ಮತ್ತು ರಾಜಸ್ಥಾನದ ವಿದ್ಯಾರ್ಥಿಗಳು ಯಕ್ಷಗಾನದ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.

ಪ್ರತಿದಿನ ಮುಂಜಾನೆ 5.30ರಿಂದ ಆರಂಭವಾಗುವ ಯಕ್ಷಗಾನ ಕಾರ್ಯಾಗಾರ ಸಂಜೆ 7.30ರವರೆಗೂ ನಡೆಯುತ್ತದೆ. ತಾಳ, ಕುಣಿತ, ಸ್ವರಾಭ್ಯಾಸವನ್ನು ಮಾಡಲಾಗುತ್ತದೆ. ಭಾವಾಭಿನಯ, ರಾಮಾಯಣ, ಮಹಾಭಾರತ ಪಾಠಗಳು ಹಾಗೂ ರಂಗ ಕ್ರಿಯೆಗಳ ತರಬೇತಿ ನಡೆಯುತ್ತಿದೆ. ಇನ್ನು ವಿದ್ಯಾರ್ಥಿಗಳು ಕರಾವಳಿ ಭಾಷೆ, ಸಂಸ್ಕೃತಿ ಕಲಿಯುತ್ತಾ ಯಕ್ಷಗಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತಾನಾಡಿದ ಯಕ್ಷಗಾನ ಗುರು ಶೈಲೇಶ್, ಪ್ರತಿ ವರ್ಷ ಈ ರೀತಿಯ ತರಬೇತಿ ಕಾರ್ಯಗಾರ ನಡೆಯುತ್ತದೆ. ಯಕ್ಷಗಾನ ರಾಜ್ಯ, ಗಡಿ, ಭಾಷೆಯನ್ನು ಮೀರಿದ್ದಾಗಿದೆ. ಉತ್ತರ ಭಾರತದ ವಿದ್ಯಾರ್ಥಿಗಳು ಈ ಬಾರಿ ಬಹಳ ಆಸಕ್ತಿಯಿಂದ ಯಕ್ಷಗಾನ ಕಲಿಯುತ್ತಿದ್ದಾರೆ. ಯಕ್ಷಗಾನದ ಎಲ್ಲಾ ಪ್ರಾಕಾರಗಳನ್ನು ಕಲಿಸಿಕೊಡುತ್ತಿದ್ದೇವೆ. ದಿನಕ್ಕೆ 12 ಗಂಟೆ ಯಕ್ಷಗಾನ ತರಬೇತಿ ನೀಡುತ್ತಿದ್ದೇವೆ. ಜೊತೆಗೆ ಕರಾವಳಿಯ ವಿವಿಧ ಕಲಾಭ್ಯಾಸವನ್ನು ಮಾಡುತ್ತಿದ್ದೇವೆ. ತಿಂಗಳ ಅಭ್ಯಾಸದ ಬಳಿಕ ಯಕ್ಷಗಾನದಲ್ಲಿ ಪರಿಪೂರ್ಣತೆ ಪಡೆಯಲಿದ್ದಾರೆ ಅಂತಾ ಹೇಳಿದರು.

ಇನ್ನು ತರಬೇತಿ ಪಡೆಯುತ್ತಿರುವ ರಾಜಸ್ಥಾನ ಮೂಲದ ಸೃತಿ ಚೋಪ್ರಾ ಮಾತನಾಡಿ, ಇದೊಂದು ಅತೀ ವಿಶಿಷ್ಟವಾದ ನೃತ್ಯ ಪ್ರಾಕಾರವಾಗಿದೆ. ದೇಹದ ಎಲ್ಲಾ ಭಾಗಗಳಿಗೂ ಯಕ್ಷಗಾನದಲ್ಲಿ ಕೆಲಸವಿದೆ. ನೃತ್ಯ, ಸಂಭಾಷಣೆ, ಸಂಗೀತ ಎಲ್ಲವೂ ಇದೆ. ಪ್ರಾರಂಭದಲ್ಲಿ ಯಕ್ಷಗಾನದ ಬಗ್ಗೆ ಕೇವಲ ಯೂಟ್ಯೂಬ್‌ನಲ್ಲಿ ನೋಡಿ ತಿಳಿದುಕೊಂಡಿದ್ದೆವು. ಉಡುಪಿಗೆ ಬಂದ ಬಳಿಕ ಯಕ್ಷಗಾನದ ಎಲ್ಲಾ ಮಜಲುಗಳ ಬಗ್ಗೆ ಅಭ್ಯಾಸವಾಗಿದೆ ಅಂತಾ ಹೇಳಿದ್ದಾರೆ.

ಒಟ್ಟಿನಲ್ಲಿ ಕಲೆ ಮತ್ತು ಕಲಾವಿದನಿಗೆ ಭಾಷೆ ಮತ್ತು ಗಡಿಯ ಹಂಗಿಲ್ಲ. ಶೃದ್ಧೆಯಿಂದ ಕಲಿತರೆ ಯಾವುದೇ ಕಲೆಯೂ ಒಲಿಯುವದರಲ್ಲಿ ಎರಡು ಮಾತಿಲ್ಲ ಅನ್ನೋದು ರುಜುವಾತಾಗಿದೆ. ಕರಾವಳಿಯ ಸೊಗಡು ಈಗ ಉತ್ತರ ಭಾರತದತ್ತ ಪಸರಿಸುತ್ತಿದ್ದು, ಯಕ್ಷಗಾನ ವಿಶ್ವಗಾನ ಆಗುವತ್ತ ಹೆಜ್ಜೆ ಹಾಕುತ್ತಿದೆ.
ಕಟೀಲು ಯಕ್ಷಗಾನ ಮೇಳ ತಿರುಗಾಟ ಆರಂಭ
ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳಲ್ಲಿ ಬಂಧಿಯಾಗಿರುವ, ಜಿಲ್ಲೆಯ ಅಧಿದೇವತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸಿದೆ. ದೇವಳದ ಆರು ಮೇಳಗಳು ಸೋಮವಾರದಿಂದ ಜೈತ ಯಾತ್ರೆ ಆರಂಭಿಸಿದ್ದು, ಇನ್ನು 167 ದಿನಗಳ ಕಾಲ ಕಟೀಲು ಮೇಳಗಳು ಯಕ್ಷಗಾನ ಪ್ರದರ್ಶನ ನೀಡಲಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಪ್ರಿಯೆ. ಆದ್ದರಿಂದ ಭಕ್ತರು ತಮ್ಮ ಬಯಕೆ, ಇಷ್ಟಾರ್ಥ ಸಿದ್ಧಿಗೆ ತಾಯಿಗೆ ಯಕ್ಷಗಾನ ಸೇವೆಯನ್ನು ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿ ಕಟೀಲು ಶ್ರೀದೇವಿಯೇ ಬರುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ.
ನವೆಂಬರ್ 29ರಿಂದ ಆರಂಭವಾದ ಕಟೀಲು ಯಕ್ಷಗಾನ ಪ್ರದರ್ಶನ ಮೇ 25ರವರೆಗೆ ಅಂದರೆ ಸರಿಸುಮಾರು 167 ದಿನಗಳ ಕಾಲ ಪ್ರದರ್ಶನ ನಡೆದು ವರ್ಷದ ತಿರುಗಾಟ ಮುಕ್ತಾಯವಾಗುತ್ತದೆ.












Click it and Unblock the Notifications