ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಹಿಂದೂ ಯುವತಿಯ ಮಾದರಿ ಮದುವೆ
ಉಡುಪಿ, ಆಗಸ್ಟ್ 26 : ಹೆತ್ತವರನ್ನು ಕಳೆದುಕೊಂಡು ಅನಾಥೆ ಆಗಿದ್ದ ಹಿಂದೂ ಯುವತಿಗೆ ಮದುವೆ ಮಾಡಿಸಲು ಎಲ್ಲ ಧರ್ಮದವರೂ ಒಂದಾದ ಘಟನೆಯಿದು. ಉಡುಪಿಯ ಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಸಾದಿಕ್ ಈ ಮದುವೆಯ ನೇತೃತ್ವ ವಹಿಸಿದ್ದು, ಇವರೊಂದಿಗೆ ಸರ್ವಧರ್ಮೀಯರು ಸಾಥ್ ನೀಡುವ ಮೂಲಕ ಮಾದರಿ ಮದುವೆ ಸಮಾರಂಭ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಕಾಪು ಫಕೀರ್ಣಕಟ್ಟೆಯ ಜನತಾಕಾಲೋನಿ ನಿವಾಸಿಯಾದ ದಿವ್ಯಾ ಬಾಲ್ಯದಲ್ಲೇ ತನ್ನ ಹೆತ್ತವರನ್ನು ಕಳೆದುಕೊಂಡು ದೊಡ್ಡಮ್ಮ ಮೋಹಿನಿ ಅವರ ಆರೈಕೆಯಲ್ಲಿ ಬೆಳೆದಿದ್ದರು. ದಿವ್ಯಾ ಅವರಿಗೆ ವರನನ್ನು ಹುಡುಕುವ ಪ್ರಯತ್ನದಲ್ಲಿದ್ದರೂ ಬಡತನದ ಕಾರಣ ಹಿನ್ನಡೆಯಾಗಿತ್ತು.

ಈ ಸಂದರ್ಭದಲ್ಲಿ ಮೋಹಿನಿಯವರ ನೆರೆಕೆರೆಯ ನಿವಾಸಿ ಕೈರುನ್ನೀಸಾ ಉಚ್ಚಿಲ ಸಮೀಪದ ಪಣಿಯೂರಿನ ಮಂಜುನಾಥ ಎಂಬ ಹುಡುಗನ ನೆಂಟಸ್ತಿಕೆಯನ್ನು ತಂದಿದ್ದರು. ಮದುವೆಗೆ ದಿನ ನಿಗದಿ ಪಡಿಸಲಾಯಿತು.
ದೊಡ್ಡಮ್ಮ ಇತರರರಿಗೆ ದಿವ್ಯಾಳ ಮದುವೆಯನ್ನು ಅದ್ಧೂರಿಯಾಗಿ ನಡೆಸಬೇಕು ಅನ್ನೋ ಇಸೆ ಇದ್ದರೂ ಬಡತನದ ಕಾರಣದಿಂದ ಅದು ಸಾಧ್ಯವಿಲ್ಲ ಎಂದಾಯಿತು. ಈ ಕುಟುಂಬಕ್ಕೆ ಸ್ಪಂದಿಸಿದ ಮೊಹ್ಮಮದ್ ಸಾದಿಕ್ ದಿನಾರ್ ಮದುವೆಯ ಔತಣಕೂಟವನ್ನು ತನ್ನ ಮನೆಯಲ್ಲೇ, ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಗುರುವಾರ ಬೆಳಗ್ಗೆ ಕಟೀಲು ದುರ್ಗಾ ಪರಮೇಶ್ವರೀ ದೇವಳದಲ್ಲಿ ಮದುವೆ ಆಯಿತು. ಮಧ್ಯಾಹ್ನ ಕಳತ್ತೂರು ಶೇಖರ ಶೆಟ್ಟಿ ಸಭಾಂಗಣದಲ್ಲಿ ಸಂಭ್ರಮದ ಔತಣಕೂಟ ನಡೆಯಿತು. ಇದರಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ಎರಡೂ ವಿಧದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ವಿನಯಕುಮಾರ್ ಸೊರಕೆ, ಕಾಪು ಪುರಸಭಾ ಮುಖ್ಯಧಿಕಾರಿ ರಾಯಪ್ಪ, ಬಿಜೆಪಿ ಮುಖಂಡರಾದ ಅರುಣ್ ಶೆಟ್ಟಿ ಪಾದೂರು ಭಾಗವಹಿಸಿದ್ದರು.












Click it and Unblock the Notifications