ಕಾಪು ಮಾರಿಗುಡಿ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ; ಮುಸ್ಲಿಂ ವ್ಯಾಪಾರಿಗಳ ಒತ್ತಾಯ
ಉಡುಪಿ, ಮಾರ್ಚ್ 22: ಇತಿಹಾಸ ಪ್ರಸಿದ್ಧ ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿಯ ಸುಗ್ಗಿ ಮಾರಿ ಪೂಜೆಯ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ಹಿಂದು ಸಂಘಟನೆಗಳ ಒತ್ತಾಯ ಈಗ ಭಾರೀ ವಿವಾದ ಸೃಷ್ಟಿಸಿದೆ.
ಹಿಂದೂ ಸಂಘಟನೆಗಳು ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಪಟ್ಟು ಹಿಡಿದರೆ, ಇತ್ತ ಮುಸ್ಲಿಂ ವ್ಯಾಪಾರಸ್ಥರು ಮಾತ್ರ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಹಿಜಾಬ್ ಬಳಿಕ ಉಡುಪಿ ಜಿಲ್ಲೆಯಲ್ಲಿ ಪರ-ವಿರೋಧದ ಚರ್ಚೆ ತೀವ್ರವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಉಡುಪಿಯ ಬೀದಿ ಹಾಗೂ ಜಾತ್ರಾ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್, ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಕಳೆದ ಹತ್ತು ಹದಿನೈದು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬಂದಿದ್ದೇವೆ. ದೇವಸ್ಥಾನ ಕೊಟ್ಟ ಜಾಗದಲ್ಲಿ ವ್ಯಾಪಾರ ನಡೆಸಿಕೊಂಡು ಬಂದಿದ್ದೇವೆ. ಈ ವ್ಯಾಪಾರ ನಂಬಿ ಬಂದಿರುವ ನಮಗೆ ಬೇಸರವಾಗಿದೆ. ಹಿಜಾಬ್ ಬೆಳವಣಿಗೆ ನಂತರ ಬೆಂಬಲಿಸಿರುವ ಒಂದೇ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆ. ನಾನು ಸೇರಿ ಹಲವು ಮುಸ್ಲಿಮರು ಬಂದ್ ನಡೆಸಿಲ್ಲ ಬದಲಾಗಿ ಉದ್ಯೋಗ ಮಾಡಿದ್ದೇವೆ ಎಂದರು.
ಜಾತ್ರೋತ್ಸವದ ವ್ಯಾಪಾರದಲ್ಲಿ ಆ ದಿನ ಭಾಗಿಯಾಗಿದ್ದೇವೆ. ಇನ್ನು ಜಾತ್ರೆ ಬಂದಾಗ ಬೀದಿ ವ್ಯಾಪಾರ ಒಂದೇ ನಮಗಿರುವ ದಾರಿ. ಬೃಂದಾವನಸ್ಥರಾದ ಹಿರಿಯ ಯತಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ''ತನ್ನ ಧರ್ಮ ಪೂಜಿಸು ಅನ್ಯ ಧರ್ಮ ಗೌರವಿಸು'' ಎಂದಿದ್ದರು.

ಬೀದಿ ಬದಿ ವ್ಯಾಪಾರಸ್ಥರು ಅದೇ ಧ್ಯೇಯ ವಾಕ್ಯದಲ್ಲಿ ದೇವಸ್ಥಾನದ ಬಳಿ ವ್ಯಾಪಾರ ಮಾಡುತ್ತಿದ್ದೇವೆ. ಹಿಂದೂ ಸಂಘಟನೆಗಳು ಮಾನವೀಯ ದೃಷ್ಠಿಯಿಂದ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವ ವಿಶ್ವಾಸ ಇದೆ ಎಂದು ಮಹಮ್ಮದ್ ಆರೀಫ್ ಹೇಳಿದ್ದಾರೆ.
ಆದರೆ ಹಿಂದೂ ಸಂಘಟನೆಗಳು ಮಾತ್ರ ಮುಸ್ಲಿಮರಿಗೆ ಅವಕಾಶ ನೀಡಬಾರದು ಅಂತಾ ಪಟ್ಟು ಹಿಡಿದಿವೆ. ಈ ಬಗ್ಗೆ ಮಾತನಾಡಿರುವ ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಉಪಾಧ್ಯಕ್ಷ ಪ್ರಕಾಶ್ ಕುಕ್ಕೇಹಳ್ಳಿ, ಮಂಗಳವಾರದಿಂದ ನಡೆಯಲಿರುವ ಸುಗ್ಗಿ ಮಾರಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ಕೂಡಾ ನಡೆಯಲಿದೆ. ಹಣ್ಣುಕಾಯಿ, ಹೂವು, ಕೋಳಿ, ಕುರಿ, ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ನೀಡದಿರಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಇದು ಕೇವಲ ಹಿಂದೂ ಜಾಗರಣ ವೇದಿಕೆ ಮನವಿಯಲ್ಲ, ಹಿಂದೂ ಸಮಾಜದ ಮನವಿ. ಹಿಂದೂ ಧಾರ್ಮಿಕ ಕೇಂದ್ರ ಹಾಗೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು. ಈ ಹಿಂದೂ ಸಮಾಜದ ಆಗ್ರಹದ ನೇತೃತ್ವ ಹಿಂದೂ ಜಾಗರಣ ವೇದಿಕೆ ತೆಗೆದುಕೊಂಡಿದೆ. ಹಿಜಾಬ್ ತೀರ್ಪು ಧಿಕ್ಕರಿಸಿ ಬಂದ್ ಪ್ರತಿಭಟನೆ ಮಾಡಲಾಗಿತ್ತು. ಈ ನೆಲದ ಕಾನೂನು ಹಾಗೂ ಸಂವಿಧಾನ ಮುಸ್ಲಿಮರು ಒಪ್ಪುತ್ತಿಲ್ಲ ಹಾಗೂ ಗೌರವಿಸುತ್ತಿಲ್ಲ. ಇದು ಹಿಂದೂ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶದ ಪ್ರತಿಫಲವೇ ಕಾಪು ಮಾರಿಗುಡಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರಲು ಆಗ್ರಹ ಎಂದು ಪ್ರಕಾಶ್ ತಿಳಿಸಿದ್ದಾರೆ.

ಈ ಆಗ್ರಹಕ್ಕೆ ದೇವಾಲಯದ ಆಡಳಿತ ಮಂಡಳಿ ಪೂರಕವಾಗಿ ಸ್ಪಂದಿಸಿ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದೆ. ಕೋಮು ಸಂಘರ್ಷ ಆರಂಭಿಸಿದ್ದು ಮುಸ್ಲಿಮರು, ಗಂಗೊಳ್ಳಿಯಲ್ಲಿ ಗೋಹತ್ಯೆ ವಿರೋಧಿಸಿ ಪ್ರತಿಭಟನೆಯಾದಾಗ ಹಿಂದೂ ಮೀನುಗಾರ ಮಹಿಳೆಯೊಂದಿಗೆ ವ್ಯಾಪಾರ ಮಾಡದಂತೆ ನಿರ್ಧರಿಸಲಾಗಿತ್ತು. ಮುಸ್ಲಿಮರು ಆರಂಭಿಸಿರುವುದನ್ನು ಹಿಂದೂಗಳು ಮುಕ್ತಾಯ ಮಾಡುತ್ತಾರೆ. ಇದು ಯಾವುದೇ ಹಂತಕ್ಕೂ ಹೋಗಬಹುದು, ದುಷ್ಪರಿಣಾಮ ಎದುರಿಸಲು ಮುಸ್ಲಿಮರು ತಯಾರಾಗಿರಿ ಎಂದು ಪ್ರಕಾಶ್ ಕುಕ್ಕೇಹಳ್ಳಿ ಎಚ್ಚರಿಸಿದ್ದಾರೆ.
ಇನ್ನು ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ಕುಕ್ಕೆಹಳ್ಳಿ, ಗಂಗೊಳ್ಳಿಯಲ್ಲಿ ಹಿಂದೂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿದಾಗ ಮುಸ್ಲಿಮರ ಮೇಲೆ ಕ್ರಿಮಿನಲ್ ಕೇಸ್ ಹೇಳಿಕೆ ನೀಡಲು ಸಿದ್ದರಾಮಯ್ಯಗೆ ನೆನಪಾಗಿವೇ ಎಂದು ಪ್ರಶ್ನಿಸಿದ್ದಾರೆ.
ಕೇವಲ ಹಿಂದೂಗಳ ಮೇಲೆ ಸಿದ್ದರಾಮಯ್ಯ ಸವಾರಿ ಮಾಡುತ್ತಾರೆ. ಸಿದ್ದರಾಮಯ್ಯಗೆ ರಾಜಕೀಯ ಜೀವನದಲ್ಲಿ ಮುಸ್ಲಿಂ ತುಷ್ಠೀಕರಣ ಒಂದೇ ಗೊತ್ತಿದೆ. ಈ ಮುಸ್ಲಿಂ ತುಷ್ಟಿಕರಣ ಕರಾವಳಿಯಲ್ಲಿ ನಡೆಯಲ್ಲ. ಕಾಪು ಮಾರಿಗುಡಿ ವಿಚಾರವಾಗಿ ಎಲ್ಲೂ ಕಾಂಗ್ರೆಸ್ ಹೇಳಿಕೆ ನೀಡಿಲ್ಲ. ಎಲ್ಲಿಂದಲೋ ಬಂದ ಸಿದ್ದರಾಮಯ್ಯ ಬಳಿ ಹೇಳಿಸಿಕೊಳ್ಳುವ ದುರ್ಗತಿ ಹಿಂದೂ ಸಮಾಜಕ್ಕೆ ಬಂದಿಲ್ಲವೆಂದು ಪ್ರಕಾಶ್ ಹೇಳಿದ್ದಾರೆ.












Click it and Unblock the Notifications