Udupi: ತನ್ನದೇ ಬಸ್ ಕೆಳಗೆ ಸಿಲುಕಿ ದಯಾನಂದ ಶೆಟ್ಟಿ ಸಾವು
ಉಡುಪಿ, ಮಾರ್ಚ್ 14: ತನ್ನದೇ ಮಾಲೀಕತ್ವದ ಬಸ್ ಕೆಳಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಬಸ್ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ಬಸ್ ಅನ್ನು ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್ ವೊಂದರಲ್ಲಿ ರಿಪೇರಿಗೆ ನೀಡಿದ್ದರು.

ಬಸ್ ರಿಪೇರಿಗೆ ನೀಡಿ ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ನಿನ್ನೆ ( ಮಾರ್ಚ್ 13 ) ಬುಧವಾರ ಬಸ್ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದರು. ಈ ವೇಳೆ ಚಾಲಕ ಬಸ್ ಅನ್ನು ಏಕಾಏಕಿ ಚಲಾಯಿಸಿದ್ದರಿಂದ ಬಸ್ ಎದುರು ನಿಂತಿದ್ದ ದಯಾನಂದ ಶೆಟ್ಟಿ ಬಸ್ ಚಕ್ರದಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ಹಾಗೂ ಗ್ಯಾರೇಜ್ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದಾ ಬಸ್ ಮುಂದಕ್ಕೆ ಚಲಿಸಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಘಟನಾ ಸ್ಥಳದಲ್ಲಿ ಏನಾಗಿದೆ ಎನ್ನುವ ನಿಖರತೆ ತನಿಖೆ ಬಳಿಕ ತಿಳಿದು ಬರಬೇಕಿದೆ.
ಈ ದುರ್ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಬಸ್ ಚಕ್ರದ ಕೆಳಗೆ ಸಿಲುಕಿದ್ದ, ದಯಾನಂದ ಶೆಟ್ಟಿ ಅವರನ್ನು ಹೊರ ತೆಗೆದಿದ್ದಾರೆ. ಬಳಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಯಾನಂದ ಅವರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್ ದಯಾನಂದ ಶೆಟ್ಟಿ ಚಿಕಿತ್ಸೆಗೆ ಫಲಿಸದೇ ಮಣಿಪಾಲ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications