ಉಡುಪಿಯಲ್ಲಿ ಪತ್ತೆಯಾಯಿತು ಮನುಷ್ಯ ಮುಖ ಆಕಾರದ ಕೀಟ!
ಕೆಂಪು, ಹಳದಿ, ಕಿತ್ತಳೆ, ಕಂದು ಬಣ್ಣದಲ್ಲಿರುವ ಈ ಕೀಟ, ಬೆಳಗ್ಗೆ 7ರಿಂದ 8ರ ಅವಧಿಯಲ್ಲಿ ಸೂರ್ಯನ ಎಳೆ ಬಿಸಿಲ ಶಾಖ ಹೀರುತ್ತಾ ಗಿಡಗಳಲ್ಲಿ ಹೆಚ್ಚಾಗಿ ವಿಹರಿಸುತ್ತದೆ. ಮಕ್ಕಳಲ್ಲಿ ಕುತೂಹಲ ಮೂಡಿಸುತ್ತವೆ. ಫೆಬ್ರವರಿಯಿಂದ ಮೇ ತನಕದ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಕೀಟವು ಚಿಗುರು, ಕಾಂಡ, ಹಣ್ಣಿನಿಂದ ರಸ ಹೀರುತ್ತವೆ. ತಾಳೆ ಗರಿಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆಟವಾಡುವ ಮ್ಯಾನ್ ಫೇಸ್ಡ್ ಬಗ್ ನಿರುಪದ್ರವಿಯಾಗಿದೆ.
ರೈತರು ಈ ಕೀಟದ ಬಗ್ಗೆ ಯಾವುದೇ ರೀತಿಯಲ್ಲೂ ಗಾಬರಿಯಾಗಬೇಕಿಲ್ಲ, ಕೃಷಿಗೂ ಯಾವ ಹಾನಿಯನ್ನೂ ಮಾಡುವುದಿಲ್ಲ. ಗಂಡು ಗಾತ್ರದಲ್ಲಿ ಚಿಕ್ಕದಾದರೆ, ಹೆಣ್ಣು ಸ್ವಲ್ಪ ದೊಡ್ಡದು. ಕಳೆ ಗಿಡಗಳಲ್ಲಿ ಹೆಚ್ಚಾಗಿರುವ ಈ ಕೀಟಗಳು ಗುಂಪಲ್ಲಿ ಮೊಟ್ಟೆ ಇಡುತ್ತವೆ. 25ರಿಂದ 30 ದಿನವಷ್ಟೇ ಆಯುಷ್ಯವಿರುತ್ತದೆ. ಹವಾಮಾನ, ತಾಪಮಾನದ ಏರಿಳಿತಕ್ಕೆ ತಕ್ಕಂತೆ ಕೀಟದ ಸಂತಾನದಲ್ಲೂ ಏರಿಳಿತವಾಗುತ್ತದೆ.
ತಂಪು ಹವಾಮಾನವಿದ್ದರೆ ಈ ಕೀಟದ ಜೀವನ ಚಕ್ರ ಕೆಲ ದಿನ ದೀರ್ಘವಾಗಿರುತ್ತದೆ. ಕೃತಕ ಒತ್ತಡ ನಿರ್ಮಾಣವಾದರೆ (ರಾಸಾಯನಿಕ) ಸಂತತಿ ಹೆಚ್ಚಬಹುದು. ಬಾಯಿ ಕೊಳವೆಯಾಕಾರದಲ್ಲಿದ್ದು, ಚುಚ್ಚಿ ರಸ ಹೀರುವ ಈ ಕೀಟವನ್ನು ವೈಜ್ಞಾನಿಕವಾಗಿ "ಕೆಟಕ್ಯಾಂಥಸ್ ಇನ್‍ಕಾರ್ನೇಟಸ್' ಎಂದು ಕರೆಯಲಾಗುತ್ತಿದೆ.

ಪೆಂಟಟೊಮಿಡೆ ಜಾತಿಗೆ ಸೇರಿದ್ದು, ಕೀಟಶಾಸ್ತ್ರಜ್ಞರಿಗಿದು ಆಸಕ್ತಿಕರ ವಿಷಯವಾಗಿದೆ. ಉಡುಪಿ ಸಹಿತ ಕರ್ನಾಟಕ ಕರಾವಳಿಯಲ್ಲಿ ವಿರಳವಾಗಿದ್ದರೂ ಎಲ್ಲಿಂದ, ಹೇಗೆ, ಯಾಕೆ ಬಂತೆನ್ನುವ ಕುತೂಹಲ ಮೂಡಿಸಿದೆ.
ಕರಾವಳಿಯಲ್ಲಿ ಈ ಕೀಟದ ಇರವಿನ ಬಗ್ಗೆ ಈ ತನಕ ಮಾಹಿತಿ ಬಂದಿಲ್ಲ. ಕಾಣ ಸಿಕ್ಕಿದ್ದೇ ವಿರಳ. ಗಿಡ, ಬಳ್ಳಿಯ ಚಿಗುರು ಭಾಗದ ರಸ ಹೀರುವ ಈ ಕೀಟ ರೈತ, ಕೃಷಿಗೆ ಉಪದ್ರಕಾರಿಯಲ್ಲ, ಇದೊಂದು ನಿರುಪದ್ರವಿ ಜೀವಿ.
ಯಾವುದೇ ಕೀಟ ನೈಸರ್ಗಿಕವಾಗಿ ನಿಯಂತ್ರಣವಾಗುತ್ತದೆ. ಕೀಟನಾಶಕ ಬಳಸಿ ನಿಯಂತ್ರಣಕ್ಕೆ ಹೊರಟರೆ ಹೆಚ್ಚಲೂಬಹುದು ಎನ್ನುವುದು ಉಡುಪಿಯ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಸಚಿನ್ ಯು.ಎಸ್ ಅವರ ಅಭಿಪ್ರಾಯವಾಗಿದೆ.











Click it and Unblock the Notifications