Rain: ರಾಜ್ಯದ ಹಲವೆಡೆ ಅಬ್ಬರಿಸಿದ ವರುಣ, ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ಸಾವು
ಉಡುಪಿ, ಮೇ 15: ಕಳೆದ ಮೂರು ತಿಂಗಳಿಂದ ವಿಪರೀತ ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಜನರಿಗೆ ವರುಣ ಕೃಪೆ ತೋರಿದ್ದು, ಕಳೆದ ಒಂದು ವಾರದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ರಾಜ್ಯದ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಅನಾಹುತಗಳು ಕೂಡ ಸಂಭವಿಸಿದೆ.
ಉಡುಪಿಯಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಸುರೇಶ್ ಶೆಟ್ಟಿ (38) ಸಿಡಿಲು ಬಡಿದು ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿತ್ತು. ಸುರೇಶ್ ಶೆಟ್ಟಿ ಮಳೆ ಬರುವ ವೇಳೆ ಮನೆಯ ಪಕ್ಕ ನಿಂತಿದ್ದರು. ಈ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು, ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಉತ್ತರ ಕನ್ನಡದಲ್ಲಿ ಭರ್ಜರಿ ಮಳೆ: ವಿದ್ಯುತ್ ಪೂರೈಕೆ ಸ್ಥಗಿತ
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾಗಿದ್ದು, ಏಕಾಏಕಿ ಅಬ್ಬರಿಸಿದ ಗಾಳಿ ಮಳೆಗೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿರಸಿ ಪಟ್ಟಣದಲ್ಲಿ ಧಾರಾಕಾರ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿದೆ. 10ಕ್ಕೂ ಹೆಚ್ಚು ವಿದ್ಯುತ್ ಕಂಬ ಉರುಳಿಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಅಲ್ಲದೇ ಶಿರಸಿಯಿಂದ ಸಹ್ಯಾದ್ರಿ ಕಾಲೋನಿಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಬೆಳಗಾವಿ ಮಳೆ: ಧರೆಗುರುಳಿದ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, 30ಕ್ಕೂ ಹೆಚ್ಚು ಮರಗಳ ಜೊತೆಗೆ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ. ಮರಗಳು ಬಿದ್ದ ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ. ನಿಪ್ಪಾಣಿ ನಗರ ಭಾರೀ ಗಾಳಿ ಮಳೆಗೆ ಮಳೆಗೆ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಒಟ್ಟಾರೆ ಮೊದಮೊದಲು ಬಂದ ಮಳೆಗೆ ಬೆಳಗಾವಿ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.












Click it and Unblock the Notifications