ನಾಪತ್ತೆಯಾದ 7 ಮೀನುಗಾರರ ಪತ್ತೆಗೆ ಒತ್ತಾಯಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ
ಉಡುಪಿ, ಜನವರಿ 6: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆ ಮೀನುಗಾರಿಕಾ ಬೋಟ್ ಹಾಗೂ ನಾಪತ್ತೆಯಾಗಿರುವ ಏಳು ಮೀನುಗಾರರ ಶೀಘ್ರ ಪತ್ತೆಗೆ ಆಗ್ರಹಿಸಿ ಉಡುಪಿಯಲ್ಲಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ಕಣ್ಮರೆಯಾಗಿ 23 ದಿನಗಳು ಕಳೆದಿವೆ. ಶೋಧ ಕಾರ್ಯ ಅವಿರತವಾಗಿ ನಡೆಯುತ್ತಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡ ಮೀನುಗಾರರು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಅಂಗವಾಗಿ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ 30 ಸಾವಿರಕ್ಕೂ ಅಧಿಕ ಮೀನುಗಾರರು ಪಾಲ್ಗೊಂಡಿದ್ದರು.
ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಆಗ್ರಹಿಸಿದ ಮೀನುಗಾರರು ರಾಜ್ಯ ಸರಕಾರ ಸೇರಿದಂತೆ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರಣಿ, ರಸ್ತೆತಡೆ ಹಿನ್ನೆಲೆಯಲ್ಲಿ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸುವ ವಾಹನಗಳ ಸಂಚಾರಕ್ಕೆ ಪೊಲೀಸರು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. ಇದಕ್ಕೂ ಮೊದಲು ಮಲ್ಪೆ ಬಂದರ್ ನಿಂದ ಕರಾವಳಿ ಬೈಪಾಸ್ ವರೆಗೆ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಸೇರಿ ಬೃಹತ್ ಮೆರವಣಿಗೆ ನಡೆಸಿದರು.

ಆತಂಕ ಆರಂಭ
ಕಳೆದ ಡಿಸೆಂಬರ್ 13 ರಂದು ಉಡುಪಿಯ ಮಲ್ಪೆ ಬಂದರಿನಿಂದ 'ಸುವರ್ಣ ತ್ರಿಭುಜಾ' ಅನ್ನುವ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಅದರಲ್ಲಿದ್ದ 7 ಜನ ಮೀನುಗಾರರು ಮತ್ತು ಬೋಟ್ ಡಿಸೆಂಬರ್ 15 ರಿಂದ ಸಂಪರ್ಕ ಕಡಿದುಕೊಂಡಿತು. ಪ್ರಾಕೃತಿಕ ತೊಂದರೆ ಅಥವಾ ಕಡಲ್ಗಳ್ಳರ ಕೆಲಸ ಅಂತ ಮೊದಲು ಸುಮ್ಮನಿದ್ದ ಮೀನುಗಾರರಿಗೆ ಆತಂಕ ಆರಂಭವಾಯಿತು.

ಯಾವುದೇ ಸುಳಿವು ಸಿಕ್ಕಿಲ್ಲ
ಈ ಹಿನ್ನೆಲೆಯಲ್ಲಿ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಕೊಸ್ಟ್ ಗಾರ್ಡ್, ನೌಕಾ ಸೇನೆ ಮತ್ತಿತರ ವ್ಯವಸ್ಥೆಗಳನ್ನು ಬಳಸಿ ಶೋಧ ಕಾರ್ಯ ನಡೆಸಲಾಯಿತು. ಆದರೆ ಹುಡುಕಾಟ ಮುಂದುವರಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಬೃಹತ್ ಪ್ರತಿಭಟನೆ
ಮೀನುಗಾರಿಕಾ ಸಂಘಟನೆಗಳು ಸಂಬಂಧಪಟ್ಟ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಗೃಹ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಆದರೆ ಆಶ್ವಾಸನೆ ದೊರಕಿತೇ ವಿನಃ ಕಾರ್ಯ ಫಲಪ್ರದವಾಗಲಿಲ್ಲ. ದಿನಕಳೆದಂತೆ ಕಾಣೆಯಾದ ಮೀನುಗಾರರ ಮನೆಯವರ ಆತಂಕ ಹೆಚ್ಚಾಗಿದೆ. ಕಾಣೆಯಾದ ಮೀನುಗಾರರ ಪತ್ತೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಸಂಸದೆ ಶೋಭಾ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು

ಧರಣಿಗೆ ಸಾಥ್ ಕೊಟ್ಟ ಸಚಿವರು, ಶಾಸಕರು
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ. ಶಂಕರ್, ಆರ್.ಕೆ.ಗೋಪಾಲ್, ಯು.ಆರ್.ಸಭಾಪತಿ, ಲಾಲಾಜಿ ಮೆಂಡನ್, ಉದಯ ಕುಮಾರ್, ಶೆಟ್ಟಿ, ಯಶ್ಪಾಲ್ ಸುವರ್ಣ ಮತ್ತಿತರರು ಸಾಥ್ ನೀಡಿದ್ದಾರೆ.












Click it and Unblock the Notifications