10 ಹಳ್ಳಿಗೆ ವರ್ಷವಿಡಿ ಬರಪೂರ ನೀರು: ಹೊಸಂಗಡಿ ಕೋಟೆ ಕೆರೆ ಅಭಿವೃದ್ಧಿಗೆ ಸ್ಥಳೀಯರ ಒತ್ತಾಯ
ಉಡುಪಿ, ಮೇ 13: ಇದು ಅನಾದಿಕಾಲದಿಂದ ರಾಜ ಮಹಾರಾಜರ ಆಳ್ವಿಕೆ ಕಾಲದಲ್ಲೂ ಕೂಡ ಕೃಷಿಕರಿಗೆ ಜೀವ ಜಲ ಒದಗಿಸುತ್ತಿದ್ದ ಕೆರೆ. ಸುತ್ತಮುತ್ತಲಿನ 10 ಹಳ್ಳಿಗೆ ವರ್ಷವಿಡಿ ಬರಪೂರ ನೀರು ನೀಡುವ ಮೂಲಕ ಕೃಷಿಗೆ ಸಹಕಾರಿಯಾಗುತ್ತಿತ್ತು ಈ ಕೆರೆ. ಪಕ್ಕದ ಗ್ರಾಮಗಳಿಗೂ ಕೂಡ ನೀರು ನೀಡುವುದಕ್ಕೂ ಅವಕಾಶವಿರುವ ಬೃಹತ್ ಕರೆಯನ್ನು ಸದ್ಯ ಕಡೆಗಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಕೆರೆ ಕೋಟೆ ಕೆರೆ ಎಂದೇ ಪ್ರಸಿದ್ಧಿ. ಹೊಸನಗರದಿಂದ ಉಡುಪಿ ಜಿಲ್ಲೆಗೆ ಬರುವವರು ಬಾಳೇಬರೇ ಘಾಟಿಯ ಮೂಲಕ ಮಾಸ್ತಿಕಟ್ಟೆಯಿಂದ ಘಾಟಿ ಇಳಿದು ಕೆಳಗೆ ಉಡುಪಿ ಪ್ರವೇಶಿಸುತ್ತಿದ್ದಾಗಲೇ ಈ ಕೆರೆ ಕಾಣಲು ಸಿಗುತ್ತದೆ.

ಸರಿಸುಮಾರು 17 ಎಕರೆ ವಿಸ್ತಾರದಲ್ಲಿ ವಿಸ್ತೀರ್ಣದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಈ ಕೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಜೀವಜಲ ಒದಗಿಸುವ ಜೀವನದಿ ಎಂದರೆ ತಪ್ಪಾಗಲಾರದು. ಸುಮಾರು ಹದಿನೈದು ವರ್ಷಗಳ ಹಿಂದೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಿ ಈ ಕೆರೆಯನ್ನು ಅಭಿವೃದ್ಧಿ ಮಾಡಿದ್ದು ಬಿಟ್ಟರೆ ಇದುವರೆಗೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.
ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.153 ರಲ್ಲಿ 15 ಎಕರೆ ಸರ್ಕಾರಿ ಜಾಗದಲ್ಲಿ ಅನಾದಿ ಕಾಲದಿಂದ ಕೋಟೆಕೆರೆಯಿದ್ದು, ಗ್ರಾಮದ ನೂರಾರು ರೈತರ ಕೃಷಿ ಚಟುವಟಿಕೆಗೆ ಪೂರಕವಾಗಿತ್ತು. ನಂತರದ ದಿನಗಳಲ್ಲಿ ಕೆರೆಯ ಹೂಳೆತ್ತದೆ ನೀರಿನ ಮಟ್ಟ ಕುಸಿದ ಕಾರಣ ಆ ಭಾಗದ ರೈತರು ಕೃಷಿ ಚಟುವಟಿಕೆಯಿಂದ ದೂರವಾಗಿದ್ದಾರೆ.
ಕೆರೆಯ ಸುತ್ತಲೂ ಕೂಡ ಯಾವುದೇ ವ್ಯವಸ್ಥೆಗಳು ಇಲ್ಲದ ಕಾರಣ ಒತ್ತುವರಿ ಕೂಡ ನಡೆದಿದ್ದು ಇದುವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ಆರೋಪವಾಗಿದೆ. ಘಟ್ಟದಿಂದ ಹರಿದ ಬರುವ ನೀರು, ಸಮುದ್ರ ಸೇರುವ ಮೊದಲೇ ಈ ಕೆರೆಯಲ್ಲಿ ಶೇಖರಣೆಯಾಗುವ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಜಿಲ್ಲೆಯ ಬೈಂದೂರು ಕುಂದಾಪುರ ಭಾಗದ ಕೆಲವೊಂದಿಷ್ಟು ಪ್ರದೇಶಗಳಿಗೆ ನೀರು ನೀಡುವ ಸಾಧ್ಯವಿದೆ.

ಇಡೀ ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗುವವರೆಗೂ ಕೂಡ ಯಥೇಚ್ಛವಾಗಿ ನೀರು ತುಂಬಿಕೊಂಡಿರುವ ಈ ಕೆರೆಯ ಸೊಬಗನ್ನು ನೋಡುವುದೇ ಚೆಂದ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಉಡುಪಿ ಜಿಲ್ಲೆಯಲ್ಲಿರುವ ನೀರಿನ ಭವಣೆಯನ್ನ ತೀರಿಸಲು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೂ ಇಂತಹ ಕೆರೆಗಳನ್ನ ಅಭಿವೃದ್ಧಿ ಮಾಡಬೇಕಾದ ಅಗತ್ಯತೆ ಇದೆ.












Click it and Unblock the Notifications