Udupi: ಶ್ರೀಕೃಷ್ಣಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ಅರಸರು? ಏನಿದು ಹೊಸ ವಿವಾದ
ಸುಮಾರು ಎಂಟು ಶತಮಾನಗಳ ಇತಿಹಾಸವಿರುವ ಉಡುಪಿ ಶ್ರೀಕೃಷ್ಣಮಠಕ್ಕೆ ಜಾಗ ನೀಡಿದವರು ಮುಸಲ್ಮಾನ ಅರಸರಾ? ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ, ಚುನಾವಣೆಯ ವೇಳೆ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ದೇವಾಲಯದ ಜಾಗ ಯಾರಿಗೆ ಸೇರಿದ್ದು? ವರದಿ ಇಲ್ಲಿದೆ
ಉಡುಪಿ, ಮಾರ್ಚ್ 08: ಕರಾವಳಿಯನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಬಿಜೆಪಿಯವರು ಮಾಡಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್ ಮುಖಂಡರು ಆಗಿಂದಾಗೆ ಮಾಡುವುದುಂಟು. ಈಗ, ಕಾಂಗ್ರೆಸ್ ಮುಖಂಡರೊಬ್ಬರು ಸುಮಾರು ಎಂಟು ಶತಮಾನಗಳ ಇತಿಹಾಸವಿರುವ ಉಡುಪಿ ಶ್ರೀಕೃಷ್ಣಮಠದ ಜಾಗದ ಬಗ್ಗೆ ವಿವಾದಕಾರಿ ಹೇಳಿಕೆಯನ್ನು ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ವಿರುದ್ದ ಸೋಲುಂಡಿದ್ದ, ಡಿಕೆಶಿಯ ಹುಡುಗ ಎಂದೇ ಕರೆಯಲ್ಪಡುವ ಮಿಥುನ್ ರೈ, "ಉಡುಪಿ ಶ್ರೀಕೃಷ್ಣಮಠಕ್ಕೆ ಜಾಗ ಯಾರು ಕೊಟ್ಟಿದ್ದು ಎಂದರೆ ಅದು ಮುಸಲ್ಮಾನ ರಾಜರು"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ನಮ್ಮೂರ ಮಸೀದಿ ನೋಡ ಬನ್ನಿ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಿಥುನ್ ರೈ, ತುಳುವಿನಲ್ಲಿ ಈ ಮಾತನ್ನಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ದೈವಭಕ್ತ ಕುಟುಂಬದ ಹಿನ್ನಲೆಯ ಮಿಥುನ್ ರೈ ಚುನಾವಣೆಯ ಹೊತ್ತಿನಲ್ಲಿ ಓಲೈಕೆ ರಾಜಕಾರಣದ ಭಾಗವಾಗಿ ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. "ಪತ್ರಿಕೆಗಳಲ್ಲಿ ಈ ಹಿಂದೆ ಬಂದಿದ್ದ ಸುದ್ದಿಯನ್ನು ಆಧರಿಸಿಯೇ ನಾನು ಹೇಳಿಕೆಯನ್ನು ನೀಡಿದ್ದು, ನಾನು ಸೌಹಾರ್ದಯುತ ಹೇಳಿಕೆಯನ್ನು ನೀಡಿದ್ದೇನೆ"ಎಂದು ಮಿಥುನ್ ರೈ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಇದೊಂದು ಸೌಹಾರ್ದಯುತವಾದ ಹೇಳಿಕೆಯೋ ಅಥವಾ ಮುಸ್ಲಿಂ ಓಲೈಕೆಯೋ ಎಂದು ಹಲವು ಬಲಪಂಥೀಯ ಸಂಘಟನೆಗಳು ಮಿಥುನ್ ರೈ ವಿರುದ್ದ ಆಕ್ರೋಶ ಹೊರಹಾಕಿವೆ. ಇತಿಹಾಸವನ್ನು ಸರಿಯಾಗಿ ಅರಿತು ಮಿಥುನ್ ರೈ ಮಾತನಾಡಲಿ, ಅವರು ಈ ಕೂಡಲೇ ಕ್ಷಮೆಯಾಚಿಸಬೇಕೆಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಮಾನ್ಯ @TheMithunRai ಅವರೇ,
— Raghupathi Bhat (@RaghupathiBhat) March 6, 2023
➡️ ಅಯೋಧ್ಯೆಯ ಶ್ರೀರಾಮನನ್ನು ಗೋರಿಯೊಳಗೆ ಬಂಧಿಸಿಟ್ಟವರು
➡️ ಕಾಶಿ ವಿಶ್ವನಾಥನನ್ನು ಕತ್ತಲಲ್ಲಿಟ್ಟವರು
➡️ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಗುಂಬಜ್ ನಿರ್ಮಿಸಿದವರು
ಇವರೆಲ್ಲರೂ ನೀವು ಇಂದು ಹೊಗಳಿ ಮೇಲಿಟ್ಟು ಓಲೈಕೆ ಮಾಡುವವರೇ ಆಗಿದ್ದಾರೆ. pic.twitter.com/BxrYCB4yrc
ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ
"ಚುನಾವಣೆಯ ಕಾರಣಕ್ಕಾಗಿ ಮಿಥುನ್ ರೈ ಅವರು ಈ ರೀತಿಯ ಹೇಳಿಕೆಯನ್ನು ಕೊಟ್ಟಿದ್ದಾರಾ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಯಾವ ದಾಖಲೆಯ ಆಧಾರದ ಮೇಲೆ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎನ್ನುವುದು ಇಲ್ಲಿ ಪ್ರಶ್ನೆ. ನಿಜವಾದ ಸುದ್ದಿಯನ್ನು ಅವರು ಕೊಟ್ಟಿದ್ದರೆ ಅದು ಅವರಿಗೆ ವೋಟಾಗಿ ಪರಿವರ್ತನೆಯಾಗುತ್ತಿತ್ತು. ಆದರೆ, ಈ ರೀತಿಯ ಸುಳ್ಳಿನ ಹೇಳಿಕೆಯಿಂದ ಅವರು ವೋಟನ್ನು ಕಳೆದುಕೊಳ್ಳುತ್ತಾರೆ"ಎಂದು ಉಡುಪಿ ಶಾಸಕ ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
"ಉಡುಪಿ ಕ್ಷೇತ್ರ ಮತ್ತು ಕೃಷ್ಣಮಠ ಸೌಹಾರ್ದತೆಗೆ ಹೆಸರಾಗಿರುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಸಲ್ಮಾನರಿಗೆ ಮತ್ತು ಕ್ರಿಶ್ಚಿಯನ್ನರಿಗೆ ಅಷ್ಟಮಠಗಳು ಜಾಗವನ್ನು ನೀಡಿವೆ. ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣಮಠಕ್ಕೆ ಸಹಾಯ ಮಾಡಿರುವ ಬಗ್ಗೆ ಉಲ್ಲೇಖವಿದೆ. ಅಯೋಧ್ಯೆಯ ಶ್ರೀರಾಮನನ್ನು ಗೋರಿಯೊಳಗೆ ಬಂಧಿಸಿಟ್ಟವರು, ಕಾಶಿ ವಿಶ್ವನಾಥನನ್ನು ಕತ್ತಲಲ್ಲಿಟ್ಟವರು, ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಗುಂಬಜ್ ನಿರ್ಮಿಸಿದವರು. ಇವರೆಲ್ಲರೂ ನೀವು ಇಂದು ಹೊಗಳಿ ಮೇಲಿಟ್ಟು ಓಲೈಕೆ ಮಾಡುವವರೇ ಆಗಿದ್ದಾರೆ"ಎಂದು ರಘುಪತಿ ಭಟ್ ಟ್ವೀಟ್ ಮಾಡಿದ್ದಾರೆ.
ಕೃಷ್ಣಮಠದ ದಾಖಲೆ ಏನು ಹೇಳುತ್ತದೆ?
ದಾಖಲೆಗಳ ಪ್ರಕಾರ ಮುಸಲ್ಮಾನರು ಶ್ರೀಕೃಷ್ಣಮಠಕ್ಕೆ ದೇಣಿಗೆ ಮತ್ತು ಉತ್ಸವದ ಸಂದರ್ಭದಲ್ಲಿ ಪೂಜೆಗಾಗಿ ಎಣ್ಣೆಯನ್ನು ಕೊಡುತ್ತಿದ್ದರು. ಹದಿಮೂರನೇ ಶತಮಾನದಲ್ಲಿ ಉಡುಪಿಯನ್ನು ಆಳುತ್ತಿದ್ದ ರಾಮಭೋಜನು ಜಾಗವನ್ನು ಬಳುವಳಿಯಾಗಿ ಕೃಷ್ಣಮಠ ಮತ್ತು ಅಕ್ಕಪಕ್ಕದ ದೇವಸ್ಥಾನಕ್ಕೆ ನೀಡಿರುವುದು ಎಂದು ಶಾಸನದಲ್ಲಿ ದಾಖಲೆಯಾಗಿದೆ. ಸಾವಿರ ವರ್ಷಗಳ ಇತಿಹಾಸವಿರುವ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಕೃಷ್ಣಮಠವಿದೆ ಎಂದು ಹೇಳಲಾಗುತ್ತಿದೆ.
ಉಡುಪಿ ಪೇಜಾವರ ಶ್ರೀಗಳ ಸ್ಪಷ್ಟನೆ
"ಖಚಿತ ಆಧಾರದ ಮೇಲೆ ಹೇಳಿಕೆಯನ್ನು ನೀಡಿದರೆ, ಅದಕ್ಕೊಂದು ಅರ್ಥ ಬರುತ್ತದೆ. ರಾಮಭೋಜರು ಜಾಗ ನೀಡಿದ್ದಕ್ಕೆ ಆಧಾರಗಳಿವೆ, ನಮ್ಮ ಗುರುಗಳ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಲಲಾಗಿದೆ. ಮಧ್ವಾಚಾರ್ಯರು ತಮ್ಮ ಶಿಷ್ಯರೊಂದಿಗೆ ಬದರೀನಾಥಕ್ಕೆ ತೆರಳುತ್ತಿದ್ದಂತಹ ಸಂದರ್ಭದಲ್ಲಿ ಗಂಗಾ ನದಿಯನ್ನು ದಾಟಬೇಕಾಗಿತ್ತು. ನದಿಯನ್ನು ದಾಟಲು ಇದ್ದ ಎಲ್ಲಾ ಸವಲತ್ತುಗಳನ್ನು ಆ ಭಾಗವನ್ನು ಆಳುತ್ತಿದ್ದ ಮುಸ್ಲಿಂ ರಾಜರೊಬ್ಬರು ನಿಲ್ಲಿಸಿದ್ದರು".
"ಆಗ ಮಧ್ವಾಚಾರ್ಯರು ಶಿಷ್ಯರಿಗೆ ತಮ್ಮ ಕಾಲನ್ನು ಹಿಡಿದುಕೊಳ್ಳಲು ಹೇಳಿ ನದಿ ದಾಟಲು ಮುಂದಾದರು. ರಾಜನ ಸೈನಿಕರು ಅವರನ್ನು ತಡೆಯಲು ಬಂದಾಗ, ಆಚಾರ್ಯರು ಅವರಿಗೆ ಬುದ್ದಿಯನ್ನು ಹೇಳಿದರು. ಇವರ ವ್ಯಕ್ತಿತ್ವವನ್ನು ಕಂಡು ರಾಜನು ಅಲ್ಲಿ ಅರ್ಧ ರಾಜ್ಯವನ್ನು ದಾನ ಮಾಡಿದ್ದ. ಪೇಜಾವರ ಹಿರಿಯ ಶ್ರೀಗಳು ಹಿಂದೆ ಉಲ್ಲೇಖಿಸಿದ್ದು ಅದನ್ನೇ ಹೊರತು ಉಡುಪಿಯ ಜಾಗವನ್ನಲ್ಲ"ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ತುಮಕೂರಿನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.












Click it and Unblock the Notifications