Heart Attack: ಕುಂದಾಪುರದ ಖ್ಯಾತ ವೈದ್ಯ ಡಾ. ಸತೀಶ್ ಪೂಜಾರಿ ನಿಧನ
ಉಡುಪಿ, ಜುಲೈ 11: ಕುಂದಾಪುರದ ಖ್ಯಾತ ಆಸ್ಪತ್ರೆ ಶ್ರೀಮಾತಾ ಆಸ್ಪತ್ರೆಯ ಪಾಲುದಾರ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸತೀಶ್ ಪೂಜಾರಿ (54) ಇಂದು ಹೃದಯಘಾತದಿಂದ ವಿಧಿವಶರಾಗಿದ್ದಾರೆ.
ಶ್ರೀಮಾತಾ ಆಸ್ಪತ್ರೆಯ ಮಾಲೀಕರಾಗಿದ್ದ ಡಾ. ಸತೀಶ್ ಪೂಜಾರಿ ಇ.ಎನ್.ಟಿ. ತಜ್ಞ ಕೂಡ ಆಗಿದ್ದರು. ವೈದ್ಯರಾಗಿ ತಮ್ಮ ಸೇವೆ ಹಾಗೂ ಸಂಗೀತಗಾರನಾಗಿ ಕರಾವಳಿ ಭಾಗದಲ್ಲಿ ಜನಪ್ರಿಯತೆ ಪಡೆದಿದ್ದ ಡಾ.ಸತೀಶ ಪೂಜಾರಿ ಇಂದು ಮುಂಜಾನೆ ಕೋಟ ತಟ್ಟುವಿನ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.

ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದ ಡಾ. ಸತೀಶ್ ಪೂಜಾರಿ ಕರಾವಳಿ ಭಾಗದಲ್ಲಿ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೇ ಬೃಹತ್ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡುತ್ತಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ಹಾಡುಗಾರ ರಾಜೇಶ್ ಕೃಷ್ಣನ್ ಸೇರಿದಂತೆ ವಿವಿಧ ಸಂಗೀತ ದಿಗ್ಗಜರ ಜೊತೆ ಹಾಡಿರುವ ಕೀರ್ತಿ ಇವರದ್ದಾಗಿರುತ್ತದೆ. ಇನ್ನು ಫಿಟ್ನೆಸ್ ಬಗ್ಗೆಯೂ ಡಾ.ಸತೀಶ್ ಪೂಜಾರಿ ಅತಿ ಹೆಚ್ಚು ಒಲವು ಹೊಂದಿದ್ದರು. ಡಾ. ಸತೀಶ್ ಪೂಜಾರಿ ಅವರ ದಿಢೀರ್ ಅಗಲಿಕೆ ಅವರ ಆಪ್ತ ವಲಯಕ್ಕೆ ಅರಗಿಸಿಕೊಳ್ಳದಂತಾಗಿದೆ. ಮೃತರು ಪತ್ನಿ ಮತ್ತು ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.












Click it and Unblock the Notifications