'ಬಿಜೆಪಿ ಪರ ಮಾತಾಡಿದ್ರೆ ದೇಶಭಕ್ತರು, ವಿರುದ್ಧವಾದರೆ ದೇಶದ್ರೋಹಿಗಳು'
ಉಡುಪಿ, ಮಾರ್ಚ್ 11: ಪುಲ್ವಾಮಾ ಘಟನೆ ಸೆಕ್ಯೂರಿಟಿ ಫೆಲ್ಯೂರ್. ಸರ್ಜಿಕಲ್ ಸ್ಟ್ರೈಕ್ ಒಪ್ತೇವೆ, ಅದು ಸೈನಿಕರ ಸಾಧನೆ.ಅದನ್ನು ಉಪಯೋಗಿಸಿ ನೀವು ಲಾಭ ಮಾಡ್ಕೋಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಭಾನುವಾರ (ಮಾ.10) ಆಯೋಜಿಸಲಾಗಿದ್ದ ಪರಿವರ್ತನಾ ಯಾತ್ರೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರಿಗೆ ರಕ್ಷಣೆ ಮಾಡುವ ತಾಕತ್ತು ಇದ್ರೆ, ಸೈನಿಕರು ಯಾಕೆ ಸತ್ರು? ಕಳೆದ ಐದು ವರ್ಷದಲ್ಲಿ ಅತಿ ಹೆಚ್ಚು ಸೈನಿಕರು ಸತ್ತಿದ್ದಾರೆ. ಸೈನಿಕರನ್ನು ರಾಜಕೀಯ ಲಾಭಕ್ಕೆ ಉಪಯೋಗಿಸೋದು ದೇಶ ಒಡೆಯುವ ಕೆಲಸ ಎಂದು ಕಿಡಿಕಾರಿದರು.
ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗೀದಾರ್: ಸಿದ್ದರಾಮಯ್ಯ ವಾಗ್ದಾಳಿ
ಬಿಜೆಪಿ ಪರ ಮಾತಾಡಿದ್ರೆ ದೇಶಭಕ್ತರು, ಬಿಜೆಪಿ ವಿರುದ್ಧ ಮಾತಾಡಿದ್ರೆ ದೇಶದ್ರೋಹಿಗಳು. ಬಿಜೆಪಿಯವ್ರು ದೇಶಪ್ರೇಮದ ಗುತ್ತಿಗೆ ಪಡೆದಿದ್ದಾರಾ? ಮೋದಿಯೂ ದೇಶಪ್ರೇಮಿ, ರಾಹುಲ್ ಗಾಂಧಿಯೂ ದೇಶಪ್ರೇಮಿ. ದೇಶದ ವಿಷಯ ಬಂದಾಗ ನಾವೆಲ್ಲಾ ಒಂದು. ವಾಜಪೇಯಿ ಅವರ ಮುತ್ಸದ್ದಿತನ ಮೋದಿಯವರಿಗೆ ಇರಬೇಕಾಗಿತ್ತು ಎಂದು ದಿನೇಶ್ ಕುಟುಕಿದರು.
ಕೊಟ್ಟ ಭರವಸೆ ನಂಬಿ ಜನರು ಮೋದಿ ಅವರಿಗೆ ಅವಕಾಶ ನೀಡಿದ್ರು. ಮೋದಿಗಿಂತ ದೊಡ್ಡ ಸುಳ್ಳುಗಾರ ದೇಶದಲ್ಲಿ ಇಲ್ಲ. ಪ್ರಧಾನಿ ದೇಶದ ನಾಯಕ, ಅವರ ಮಾತಿಗೆ ತಿರುಗೇಟು ಕೊಡಲೇ ಬೇಕು. ಯಾಕಂದ್ರೆ ಅಚ್ಚೇದಿನ್ ಬರಲೇ ಇಲ್ಲ. ಅಭಿವೃದ್ದಿ ಸ್ಟ್ಯಾಟಿಕ್ಸ್ ಬಿಡುಗಡೆ ಮಾಡಲು ಮೋದಿ ಬಿಡಲೇ ಇಲ್ಲ ಎಂದು ದಿನೇಶ್ ಗುಂಡುರಾವ್ ಕಿಡಿಕಾರಿದರು.

ಶವದ ಮೇಲೆ ರಾಜಕಾರಣ ಮಾಡ್ಬೇಡಿ
ಅತೀ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದ್ದು ಕಳೆದ ಐದು ವರ್ಷದಲ್ಲಿ. ಮೋದಿ ಅವರ ನೋಟು ಅಮಾನ್ಯೀಕರಣ ತುಘಲಕ್ ತೀರ್ಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ದಿನೇಶ್ ಗುಂಡುರಾವ್ , ಪರೇಶ್ ಮೇಸ್ತ ಬಗ್ಗೆ ಬಿಜೆಪಿಗೆ ಜ್ಞಾಪಕ ಇದ್ಯಾ ಎಂದು ಪ್ರಶ್ನಿಸಿದರು. ವೋಟಿಗಾಗಿ ಈ ಪ್ರಕರಣ ಉಪಯೋಗಿಸಿದ್ರಿ. ಸಿಬಿಐ ತನಿಖೆ ಏನಾಯ್ತು? ಶವದ ಮೇಲೆ ರಾಜಕಾರಣ ಮಾಡ್ಬೇಡಿ ಎಂದು ವಾಗ್ದಾಳಿ ನಡೆಸಿದರು.

ಕೊಟ್ಟ ಭರವಸೆ ಒಂದೂ ಈಡೇರಿಸಿಲ್ಲ
ಉಡುಪಿ ಪರಿವರ್ತನಾ ಯಾತ್ರೆಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿಯದ್ದು ಕೇವಲ ಆಕರ್ಷಕ ಭರವಸೆಗಳು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇನೆ ಅಂದ್ರು. ಈಗ ಪಕೋಡ ಮಾರಿ ಅಂತಾರೆ. 15 ಲಕ್ಷ ಅಕೌಂಟ್ ಗೆ ಹಾಕ್ತೇನೆ ಅಂದ್ರು. 56 ಇಂಚಿನ ಎದೆ ಇದ್ರೆ ಏನು ಪ್ರಯೋಜನ? ಬಡವರಿಗೆ ಸ್ಪಂದಿಸುವ ಹೃದಯ ಬೇಕು. ದೇಶದ ಚೌಕೀದಾರ್ ಚೋರ್ ಹೇ ಅನ್ನೋದು ಗೊತ್ತಾಗಿದೆ. ಚೌಕಿದಾರ ಈಗ ಭೃಷ್ಟಾಚಾರದ ಭಾಗೀದಾರ. ಕೊಟ್ಟ ಭರವಸೆ ಈಡೇರಿಸದ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ಕೊಟ್ಟ ಭರವಸೆ ಒಂದೂ ಈಡೇರಿಸಿಲ್ಲ ಎಂದರು.
ಟ್ವೀಟ್ ನಲ್ಲಿ ಯೋಗಿಯನ್ನು ಎಳೆದ ಸಿದ್ದರಾಮಯ್ಯ: ದುಶ್ಯಾಸನನನ್ನು ನೆನಪಿಸಿದ ಬಿಜೆಪಿ

ಇಂಥ ಸುಳ್ಳುಗಾರ ಪ್ರಧಾನಿಯನ್ನು ಕಂಡಿಲ್ಲ
ನನ್ನ ರಾಜಕೀಯ ಅನುಭವದಲ್ಲಿ ಇಂಥ ಸುಳ್ಳುಗಾರ ಪ್ರಧಾನಿಯನ್ನು ಕಂಡಿಲ್ಲ. ಅದಾನಿ, ಮಲ್ಯ, ಅಂಬಾನಿ, ಲಲಿತ್ ಮೋದಿಗೆ ಅಚ್ಚೇದಿನ್ ಬಂತು. ಒಂದೇ ವೇದಿಕೆಯಲ್ಲಿ ಬನ್ನಿ ಚರ್ಚೆ ಮಾಡೋಣ ಅಂದ್ರೆ ಬರಲ್ಲ. ಮೋದಿ ಬಂದ್ರೂ ನಾನು ಚರ್ಚೆಗೆ ಸಿದ್ದ. ಯಡ್ಯೂರಪ್ಪನೂ ಬರಲ್ಲ, ಶೋಭಾ ಕರಂದ್ಲಾಜೆ ನೂ ಬರಲ್ಲ. ಶೋಭಾ ಕರಂದ್ಲಾಜೆಗೆ ಅವರ ಪಾರ್ಟಿಯವ್ರೇ ಗೋ ಬ್ಯಾಕ್ ಅಂತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕರಾವಳಿ ಜಿಲ್ಲೆಗಳಿಗೆ ಬೆಂಕಿ ಇಟ್ಟಿದ್ದಾರೆ
ಬಿಜೆಪಿಯ ಬಾಯಿಬಡುಕರಲ್ಲಿ ಶೋಭಾ ಕರಂದ್ಲಾಜೆ ನೂ ಒಬ್ರು. ಇಲ್ಲಿ ಮಾತಾಡ್ತಾರೆ, ಪ್ರಧಾನಿ ಮುಂದೆ ಬಾಯಿಮುಚ್ಚಿ ಕೂತ್ಕೋತಾರೆ. ಮೀನುಗಾರರು ಕಾಣೆಯಾದರೂ ಕೇಂದ್ರ ಸರ್ಕಾರ ಹುಡುಕುವ ಪ್ರಯತ್ನ ಮಾಡಿಲ್ಲ. ಹಸಿರು ಶಾಲು ಹಾಕ್ಕೊಂಡು ರೈತರ ಮಗ ಅಂತಾರೆ ಯಡ್ಯೂರಪ್ಪ. ಸಾಲಮನ್ನಾ ಮಾಡಿ ಅಂದ್ರೆ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಅಂತಾರೆ. ನಾನೇ ಪ್ರಧಾನಿ ಆಗಿದ್ರೆ ಅನಂತ ಕುಮಾರ್ ಹೆಗಡೆನ ಡಿಸ್ ಮಿಸ್ ಮಾಡ್ತಿದ್ದೆ. ಸಂವಿಧಾನ ಬದಲಾಯಿಸುವ ಮಾತನಾಡ್ತಾರೆ ಅನಂತ್ ಕುಮಾರ್ ಹೆಗಡೆ. ಕರಾವಳಿ ಜಿಲ್ಲೆಗಳಿಗೆ ಬೆಂಕಿ ಇಟ್ಟಿದ್ದಾರೆ. ಅವರ ಪಕ್ಷದವರನ್ನೇ ಕೊಲೆ ಮಾಡ್ತಾರೆ. ಬಿಜೆಪಿ ಕೊಲೆಗಡುಕರ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಡ್ಸೆ ಕಾಲದಿಂದ ಕೊಲೆಗಡುಕರನ್ನೆ ಸೃಷ್ಟಿ ಮಾಡಿದ್ದಾರೆ. ದೇಶಭಕ್ತರು ಬಿಜೆಪಿಯಲ್ಲಿ ಸೃಷ್ಟಿಯಾಗಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.