ರಾಜ್ಯಾದ್ಯಂತ ಸುದ್ದಿಯಾದ ಕಾಪು ಮಾರಿಗುಡಿ ಜಾತ್ರೆಗೆ ತೆರೆ
ಉಡುಪಿ, ಮಾರ್ಚ್ 23; ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ರಾಜ್ಯಾದ್ಯಾಂತ ಸುದ್ದಿಯಾಗಿದ್ದ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿಯಲ್ಲಿ ನಡೆಯುತ್ತಿರುವ ಸುಗ್ಗಿ ಜಾತ್ರೆ ಸಂಪನ್ನವಾಗಿದೆ. ದೇವಾಲಯದಲ್ಲಿ ಸುಗ್ಗಿ ಜಾತ್ರೆಯ ಧಾರ್ಮಿಕ ಕೈಂಕರ್ಯ ನೆರವೇರಿದೆ. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದ್ದು, ವಿವಾದದ ನಡುವೆಯೂ ಆತಂಕ, ಗೊಂದಲವಿಲ್ಲದೇ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ಸಹಸ್ರ ಭಕ್ತರಿಂದ ದೇವರಿಗೆ ಕೋಳಿ, ಕುರಿ ಬಲಿ ಅರ್ಪಣೆಯಾಗಿದೆ. ದೇವಾಲಯದ ಪಕ್ಕದ ಮೈದಾನದಲ್ಲಿ ಕೋಳಿ, ಕುರಿ ಬಲಿ ನೀಡಲಾಗಿದೆ. ಮಂಗಳವಾರ ತಡರಾತ್ರಿಯಿಂದ ಬುಧವಾರ ಸಂಜೆಯವರೆಗೆ ಬಲಿ ಕಾರ್ಯ ನಡೆದಿದೆ. ಇಷ್ಟು ವರ್ಷಗಳವರೆಗೆ ಮುಸ್ಲಿಂ ವ್ಯಾಪಾರಿಗಳು ಕೋಳಿ, ಕುರಿ ಮಾರಾಟವನ್ನು ಮಾಡುತ್ತಿದ್ದು, ಈ ಬಾರಿ ಮಾತ್ರ ಹಿಂದೂಗಳೇ ಮಾರಾಟ ಮಾಡಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಿಂದ ಹೆಚ್ಚುವರಿ ಸಾವಿರಾರು ಕುರಿ, ಕೋಳಿಗಳನ್ನು ಜಾತ್ರೆಗಾಗಿ ತರಲಾಗಿತ್ತು.
ದೇವಸ್ಥಾನದ ಭಕ್ತರು ಈ ಬಾರಿ ನಡೆದ ಬೆಳವಣಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದೇವಸ್ಥಾನದ ಭಕ್ತ ಲೀಲಾಧರ್, "ಈ ವರೆಗೂ ಎಲ್ಲಾ ಸಮುದಾಯದವರು ವ್ಯಾಪಾರ ಮಾಡುತ್ತಿದ್ದರು. ಕೋಳಿ, ಕುರಿ ವ್ಯಾಪಾರ ಮುಸ್ಲಿಂಮರೇ ಮಾಡುತ್ತಿದ್ದರು. ಕೋಳಿ ವ್ಯಾಪಾರ ಬಹಳ ಉತ್ತಮ ರೀತಿಯಲ್ಲೇ ನಡೆಯುತ್ತಿತ್ತು. ಆದರೆ ಈ ಬಾರಿಯ ನಿರ್ಧಾರದಿಂದ ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಎಲ್ಲರೂ ಬದುಕಬೇಕು ಅವರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕಿತ್ತು" ಎಂದರು.

ಹಿಂದೂ ವ್ಯಾಪಾರಿಗಳ ಸಂತಸ
ಕುರಿ, ಕೋಳಿ ವ್ಯಾಪಾರ ಮಾಡಿದ ಹಿಂದೂ ಯುವಕರು ಈ ಬಾರಿಯ ವ್ಯಾಪಾರದಿಂದ ಖುಷಿ ಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಕೋಳಿ ವ್ಯಾಪಾರಿ ರಂಜಿತ್, "ನಮ್ಮ ದೇವಾಲಯದಲ್ಲಿ ಹಿಂದೂ ವ್ಯಾಪಾರಿಗಳಿಗೆ ಹಕ್ಕು ಸಿಕ್ಕಿದೆ. ನಾವೆಲ್ಲಾ 22-23 ವರ್ಷದ ಯುವಕರೇ ವ್ಯಾಪಾರ ಮಾಡುತ್ತಿದ್ದೇವೆ. ಈ ಹಿಂದೆ ಬಿಡ್ಡಿಂಗ್‌ನಲ್ಲಿ ಮುಸ್ಲಿಂ ವ್ಯಾಪಾರಿಗಳದ್ದೇ ಪ್ರಾಬಲ್ಯ ಇತ್ತು. ನಮಗೆ ಅವಕಾಶವೇ ಸಿಗುತ್ತಿರಲಿಲ್ಲ. ಹಿಂದೂ ದೇವಾಲಯದಲ್ಲಿ ನಮಗೆ ವ್ಯಾಪಾರಕ್ಕೆ ಅವಕಾಶ ಇರಲಿಲ್ಲ. ಈ ಬಾರಿ ಬದಲಾವಣೆ ಬಂದಿದೆ" ಎಂದು ಹೇಳಿದರು.

ದೇವಾಲಯ ಒಳ್ಳೆಯ ಕೆಲಸ ಮಾಡಿ
"ನಮ್ಮ ದೇವಸ್ಥಾನದ ವ್ಯಾಪಾರಕ್ಕೆ ಬುನಾದಿ ಸಿಕ್ಕಿದೆ. ಹಿಂದೂ ಸಂಘಟನೆ ಹಾಗೂ ದೇವಾಲಯದ ಆಡಳಿತ ಒಳ್ಳೆ ಕೆಲಸ ಮಾಡಿದೆ. ಶಾಂತಿಯುತವಾಗಿ ಹಿಂದೂಗಳೇ ವ್ಯಾಪಾರ ಮಾಡುತ್ತಿದ್ದಾರೆ. ಒಂದೇ ಬೆಲೆಯಲ್ಲಿ ವ್ಯಾಪಾರ ಆಗುತ್ತಿರುವುದು ಭಕ್ತರಿಗೆ ಖುಷಿ ಕೊಟ್ಟಿದೆ. ಮುಂದೆ ಪ್ರತಿ ವರ್ಷ ನಾವೇ ವ್ಯಾಪಾರ ಮಾಡುತ್ತೇವೆ" ಎಂದು ಕೋಳಿ ವ್ಯಾಪಾರಿ ರಂಜಿತ್ ತಿಳಿಸಿದರು.

ಮುಸ್ಲಿಂಮರಿಗೆ ನಿರಾಕರಣೆ
ಎರಡು ದಿನಗಳ ಕಾಪುವಿನ ಸುಗ್ಗಿ ಮಾರಿ ಜಾತ್ರೆಯಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲೇ ಮುಸ್ಲಿಂ ವ್ಯಾಪಾರಿಗಳಿಗೆ ಭಾಗವಹಿಸಲು ನಿರಾಕರಿಸಲಾಗಿತ್ತು. ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಸುಮಾರು 300 ಮುಸ್ಲಿಂ ವ್ಯಾಪಾರಿಗಳು ಭಾಗವಹಿಸುತ್ತಿದ್ದ ಜಾತ್ರೆ ಇದಾಗಿದ್ದು, ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಮಾರಿಜಾತ್ರೆ ಇದಾಗಿದೆ.

ಹಿಂದೂ ವ್ಯಾಪಾರಿಗಳ ಸ್ಟಾಲ್
ಪ್ರತಿ ವರ್ಷ ಕೋಳಿ, ಕುರಿ ಸೇರಿದಂತೆ ವಿವಿಧ ಪೆಂಡಾಲ್ ಹಾಕುವ ಮೂಲಕ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಆದರೆ ಈ ಬಾರಿ ಹರಾಜಿನಲ್ಲಿ ಹಿಂದೂ ವ್ಯಾಪಾರಿಗಳದ್ದೇ ಸ್ಟಾಲ್ ಹಾಕಲಾಗಿದೆ. ಹಿಂದೂ ವ್ಯಾಪಾರಿಗಳು ಕೋಳಿ, ಕುರಿ ಮಾರಾಟ ಮಾಡಿದ್ದಾರೆ. ಮಾರಿಗುಡಿ ಜಾತ್ರೆಯಲ್ಲಿ ಶಾಂತಿ ಕದಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.












Click it and Unblock the Notifications