ಉಡುಪಿ; ಜನತಾ ದರ್ಶನದಲ್ಲಿ ಬೆಳಗ್ಗೆ ದೂರು, ಮಧ್ಯಾಹ್ನವೇ ಅಧಿಕಾರಿ ಭೇಟಿ
ಉಡುಪಿ, ಸೆಪ್ಟೆಂಬರ್ 26; ಕರ್ನಾಟಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಜಿಲ್ಲೆಗಳಲ್ಲಿ 'ಜನತಾ ದರ್ಶನ' ನಡೆಸುತ್ತಿದೆ. ಸೆಪ್ಟೆಂಬರ್ 25ರ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ನಡೆಸಿ, ಜನರ ಅಹವಾಲುಗಳನ್ನು ಆಲಿಸಿ, ಪರಿಹಾರ ನೀಡಲಾಯಿತು.
ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಮಧ್ಯಾಹ್ನ ಅಧಿಕಾರಿಗಳ ಭೇಟಿ; ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಮಾಧವ ವಾಗ್ಲೆ ಎಂಬುವವರು 5 ಸೆಂಟ್ಸ್ ಜಮೀನಿನಲ್ಲಿ ಹಳೆಯ ಮನೆ ಹೊಂದಿದ್ದು, ತಮ್ಮ ಹೆಸರಿಗೆ ಖಾತೆ, ಪಹಣಿ ಹೊಂದಿ ಅಲ್ಲಿಯೇ ವಾಸಿಸುತ್ತಿದ್ದು, ಮನೆಯ ರಿಪೇರಿಗೆ ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಕೋರಿ, ಸಲ್ಲಿಸಿದಾಗ ಅರಣ್ಯ ಇಲಾಖೆಯವರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆಕ್ಷೇಪಣೆ ಇದೆ ಎಂದು ಅಹವಾಲನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಕೆ ಮಾಡಿದರು.
ಆಗ ಅಲ್ಲಿಯೇ ಇದ್ದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕ್ಲಿಫರ್ಡ್ ಲೋಬೋಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಮಧ್ಯಾಹ್ನವೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ವರದಿ ನೀಡುವಂತೆ ಸೂಚನೆ ನೀಡಿದರು. ಅದರನ್ವಯ ಅರಣ್ಯ ಸಂರಕ್ಷಣಾ ಅಧಿಕಾರಿ ಅರ್ಜಿದಾರರ ಜೊತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಳಗ್ಗೆ ಕೊಟ್ಟ ದೂರಿಗೆ ಮಧ್ಯಾಹ್ನವೇ ಸ್ಪಂದನೆ ದೊರೆಯಿತು.
ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, "ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಸ್ಪಂದಿಸಿ, ಅವರುಗಳ ಆಶೋತ್ತರಗಳನ್ನು ಈಡೇರಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಇದಕ್ಕನುಗುಣವಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು" ಎಂದರು.
"ಜನರು ನಮ್ಮನ್ನು ನಂಬಿ ಸರ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಅವರಿಗೆ ನೀಡಿರುವ ಭರವಸೆಗಳನ್ನು ಹಂತಹಂತವಾಗಿ ನೂರು ದಿನಗಳಲ್ಲಿ ಈಡೇರಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ. ಅದರ ಜೊತೆಯಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಿ, ಪರಿಹರಿಸಲು ಜನತಾ ದರ್ಶನ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತಿದೆ" ಎಂದು ಹೇಳಿದರು.
"ಸಾಮಾನ್ಯವಾಗಿ ಪೊಲೀಸ್, ಅರಣ್ಯ, ಆರೋಗ್ಯ, ಕಂದಾಯ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ದಿನನಿತ್ಯ ಜನರು ಕೆಲಸಗಳನ್ನು ಅರಸಿ ಬರುತ್ತಾರೆ. ಈ ರೀತಿ ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದಾಗ ಅವರನ್ನು ಅಲೆಯುವಂತೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ತಮ್ಮ ಅಹಂ ಬಿಟ್ಟು ಜನಸಾಮಾನ್ಯರ ಕಷ್ಟಗಳಿಗೆ ಹೃದಯವಂತರಾಗಿ ಸ್ಪಂದಿಸಬೇಕು" ಎಂದು ಸಚಿವರು ಕರೆ ನೀಡಿದರು.
"ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ 145 ಅರ್ಜಿಗಳು ಬಂದಿವೆ. ಇವುಗಳನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಬಗೆಹರಿಸಲಾಗುವುದು. ಕೆಲವು ಅರ್ಜಿಗಳು ಸ್ಥಳದಲ್ಲಿಯೇ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಕಾಲಮಿತಿಯೊಳಗೆ ಸ್ಪಂದಿಸಲು ಸೂಚಿಸಲಾಗುವುದು" ಎಂದು ಸಚಿವರು ಜನರಿಗೆ ಭರವಸೆ ನೀಡಿದರು.
"ಮುಂದಿನ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ದಿನ ಬಂದಿರುವ ಎಲ್ಲಾ ಅರ್ಜಿಗಳ ವಿಲೇವಾರಿ ಆಗಿರುವ ಬಗ್ಗೆ ಕೂಲಂಕುಷವಾಗಿ ಮೊದಲ ಒಂದು ಗಂಟೆಯಲ್ಲಿ ಪರಿಶೀಲಿಸಿ, ಅರ್ಜಿದಾರರಿಂದ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು" ಎಂದು ಸಚಿವರು ತಿಳಿಸಿದರು.












Click it and Unblock the Notifications