ಶಾಲೆ-ಕಾಲೇಜುಗಳಷ್ಟೇ ಅಲ್ಲ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ನಿಷೇಧ: ಬಿಜೆಪಿ ಮುಖಂಡ
ಉಡುಪಿ, ಏಪ್ರಿಲ್ 22: ಕಾಲೇಜುಗಳಲ್ಲಿ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿಯೂ ಹಿಜಾಬ್ ಅನ್ನು ನಿಷೇಧ ಮಾಡಲಾಗುತ್ತದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ, "ಮುಂದಿನ ದಿನಗಳಲ್ಲಿ ಹಿಜಾಬ್ ಅನ್ನು ಶಾಲೆಗಳಲ್ಲಿ ಮಾತ್ರವಲ್ಲ ಎಲ್ಲಾ ಸಾರ್ವಜನಿಕ ಪ್ರದೇಶದಲ್ಲಿಯೂ ನಿಷೇಧ ಮಾಡುವ ಎಲ್ಲಾ ಸಾಧ್ಯತೆಗಳು ಇದೆ," ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲೇ ಯುರೋಪ್ ದೇಶಗಳನ್ನು ಉಲ್ಲೇಖ ಮಾಡಿದ್ದಾರೆ.
"ಯುರೋಪ್ ರಾಷ್ಟ್ರಗಳಲ್ಲೂ ಈ ಬಗ್ಗೆ ಚರ್ಚೆ ಆಗುತ್ತಿದೆ. ಇದು ದೊಡ್ಡ ವಿಚಾರವಾಗಿದೆ. ನಮ್ಮ ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿಯೂ ಹಿಜಾಬ್ ಅನ್ನು ನಿಷೇಧ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

ಹಿಜಾಬ್ ನಿಷೇಧಿಸಿ ವಿಶ್ವಕ್ಕೆ ಉತ್ತಮ ಸಂದೇಶ: ಯಶ್‌ಪಾಲ್
"ಭಾರತದಲ್ಲಿ ನಾವು ಹಿಂದೂ ರಾಷ್ಟ್ರ ಕಲ್ಪನೆಗೆ ಮುಂದಾದವರು. ಫ್ರಾನ್ಸ್‌ಗಿಂತಲೂ ಮೊದಲು ನಾವು ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ. ಫ್ರಾನ್ಸ್‌ಗಿಂತಲೂ ಮೊದಲು ದೇಶದಲ್ಲಿ ಹಿಜಾಬ್ ಅನ್ನು ನಿಷೇಧ ಮಾಡಲಾಗುತ್ತದೆ. ಈ ಮೂಲಕ ವಿಶ್ವಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದಂತೆ ಆಗಲಿದೆ," ಎಂದು ಕೂಡಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಇನ್ನು ಈ ಹಿಜಾಬ್ ವಿದ್ಯಾರ್ಥಿನಿಯರ ಹಿಂದೆ ಯಾರಾದರೂ ಇದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ, "ಈ ಆರು ಜನ ವಿದ್ಯಾರ್ಥಿನಿಯರು ಬರೀ ವಿದ್ಯಾರ್ಥಿನಿಯರು ಅಲ್ಲ, ಅವರಿಗೆ ಬೇರೆ ನಂಟು ಇದೆ ಎಂದು ನಾನು ಈ ಹಿಂದೆಯೇ ತಿಳಿಸಿದ್ದೇನೆ," ಎಂದು ಪ್ರಸ್ತಾಪ ಮಾಡಿದ್ದಾರೆ.

ಪಿಯುಸಿ ಪರೀಕ್ಷೆ ವೇಳೆ ಗೊಂದಲಕ್ಕೆ ಅವಕಾಶವಿಲ್ಲ: ಯಶ್‌ಪಾಲ್
ರಾಜ್ಯದಲ್ಲಿ ಇಂದಿನಿಂದ (ಏಪ್ರಿಲ್ 22) ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಈ ನಡುವೆ ಹಿಜಾಬ್ ವಿಚಾರದಲ್ಲಿ ಇನ್ನು ಕೂಡಾ ಗೊಂದಲಗಳು ನಡೆಯುತ್ತಿದೆ. ಕೆಲವೆಡೆ ಹೈಕೊರ್ಟ್ ಆದೇಶದಂತೆ ಹಿಜಾಬ್ ಧರಿಸದೆಯೇ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾದರೆ, ಇನ್ನೂ ಕೆಲವೆಡೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಹಿಜಾಬ್ ಇಲ್ಲದೆ ನಾವು ಪರೀಕ್ಷೆಯನ್ನೇ ಬರೆಯಲ್ಲ ಎಂದು ಹಿಜಾಬ್ ಪ್ರತಿಭಟನೆ ಆರಂಭ ಮಾಡಿದ ವಿದ್ಯಾರ್ಥಿನಿಯರ ಪೈಕಿ ಆಲಿಯಾ, ರೇಷಂ ಹೇಳಿದ್ದಾರೆ.
ಇನ್ನು ಇದಕ್ಕೂ ಮುನ್ನ ಹೇಳಿಕೆ ನೀಡಿರುವ ಯಶ್‌ಪಾಲ್ ಸುವರ್ಣ, "ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಲಾಗದು," ಎಂದು ತಿಳಿಸಿದ್ದಾರೆ ಯಶ್‌ಪಾಲ್ ಸುವರ್ಣ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಕೂಡಾ ಹೌದು.
"ಎಲ್ಲರೂ ಸರ್ಕಾರದ ಸುತ್ತೋಲೆಯನ್ನು ಪಾಲನೆ ಮಾಡಬೇಕು. ಹಿಜಾಬ್ ವಿಚಾರದಲ್ಲಿ ಕೋರ್ಟ್ ಮೆಟ್ಟಲೇರಿದ ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಚಿಂತನೆ ಮಾಡಬೇಕು. ನಿಯಮವನ್ನು ಉಲ್ಲಂಘನೆ ಮಾಡಿದರೆ, ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಮತ್ತೆ ಪರೀಕ್ಷಾ ಕೇಂದ್ರದಲ್ಲಿ ಗೊಂದಲವನ್ನು ಸೃಷ್ಟಿ ಮಾಡಬೇಡಿ," ಎಂದು ಮನವಿ ಮಾಡಿದ್ದರು.












Click it and Unblock the Notifications