ಉಡುಪಿಯ ಸ್ವರ್ಣಾ ಅಕ್ರಮ ಮರಳು ದಾಸ್ತಾನು ಕಳ್ಳತನ: ದೂರು ದಾಖಲು
ಉಡುಪಿ, ಜೂನ್ 26: ಉಡುಪಿಯ ಸ್ವರ್ಣಾ ನದಿಯ ಮರಳು ಲೂಟಿ ಪ್ರಕರಣ ಇದೀಗ ಲೋಕಾಯುಕ್ತದ ಮೆಟ್ಟಿಲು ಹತ್ತಿರುವುದರ ನಡುವೆಯೇ ಇನ್ನೊಂದು ತಿರುವು ಪಡೆದುಕೊಂಡಿದೆ.
ಸ್ವರ್ಣಾ ನದಿಗೆ ಕಟ್ಟಲಾದ ಬಜೆ ಡ್ಯಾಂ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಅಕ್ರಮವಾಗಿ ಮರಳುಗಾರಿಕೆ ನಡೆಸಿ, ಬಳಿಕ ಗಣಿ ಇಲಾಖೆ ವಶದಲ್ಲಿದ್ದ 20 ಮೆಟ್ರಿಕ್ ಟನ್ ಮರಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಗಣಿ ಇಲಾಖೆ ಅಧಿಕಾರಿ ಗೌತಮ್ ಶಾಸ್ತ್ರೀ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಮೇ ತಿಂಗಳು ಲೋಕಾಯುಕ್ತ ಹಾಗೂ ಗಣಿ ಇಲಾಖೆ ದಾಳಿ ನಡೆಸಿ ಅನಧಿಕೃತವಾಗಿ ಹೂಳೆತ್ತಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡಿತ್ತು. ಈ 70 ಮೆಟ್ರಿಕ್ ಟನ್ ಹೂಳು ಮಿಶ್ರಿತ ಮರಳನ್ನು ಹಿರಿಯಡ್ಕದಲ್ಲಿ ದಾಸ್ತಾನು ಮಾಡಲಾಗಿತ್ತು. ಯೋಜಕ ಕಂಪನಿಗೆ ಹೂಳೆತ್ತುವ ಟೆಂಡರ್ ನೀಡಲಾಗಿತ್ತು.

ಇದೀಗ ಯೋಜಕ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳಾದ ದಯಾನಂದ ಮಲ್ಯ, ಅಶೋಕ ಜೋಗಿ ಮೇಲೆ ಗಣಿ ಇಲಾಖೆ ಅಧಿಕಾರಿ ಗೌತಮ್ ಶಾಸ್ತ್ರೀ ಕೇಸು ದಾಖಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಸ್ವರ್ಣಾ ನದಿಯ ಮರಳು ಲೂಟಿಗೆ ಸಂಬಂಧಿಸಿ ಉಡುಪಿಯ ಯುವ ಕಾಂಗ್ರೆಸ್, ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾಧಿಕಾರಿ ವಿರುದ್ಧವೇ ದೂರನ್ನು ದಾಖಲಿಸಿದೆ. ಗುರುವಾರ ಕೂಡ ಯುವ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿ ಲೋಕಾಯುಕ್ತ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಇದೇ ಹೊತ್ತಿಗೆ ಅಕ್ರಮ ಮರಳು ದಾಸ್ತಾನು ಕಳ್ಳತನವಾಗಿದ್ದು, ಮರಳು ಲೂಟಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ.












Click it and Unblock the Notifications