ಉಡುಪಿ: ಸಿಎಂ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭೂಸ್ಪರ್ಶದ ವೇಳೆ ಅಗ್ನಿ ದುರಂತ
ಉಡುಪಿ, ಏಪ್ರಿಲ್ 13: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭೂಸ್ಪರ್ಶದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ಆವರಿಸಿದ್ದು, ಅದೃಷ್ಟವಶಾತ್ ಬಸವರಾಜ ಬೊಮ್ಮಾಯಿ ಅಪಾಯದಿಂದ ಪಾರಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಕಾರ್ಯಕ್ರಮಗಳ ವೇಳಾಪಟ್ಟಿಯಂತೆ ಆರೆ ಶಿರೂರು ಹೆಲಿಪ್ಯಾಡ್‌ನಿಂದ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ದೇವಾಲಯಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭೂಸ್ಪರ್ಶದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಹೆಲಿಪ್ಯಾಡ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವಣ ಸೃಷ್ಟಿ ಆಗಿತ್ತು. ನೋಡ ನೋಡುತ್ತಿದ್ದಂತೆ ಹೆಲಿಕಾಪ್ಟರ್ ಲ್ಯಾಂಡ್ ಆದ ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡಿದೆ. ಕೊನೆಗೂ ಪೈಲೆಟ್ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದು, ಬಸವರಾಜ ಬೊಮ್ಮಾಯಿ ಅಪಾಯದಿಂದ ಪಾರಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ- ಉಡುಪಿ ದೇವಾಲಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ
ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರು ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಬುಧವಾರ ಬಸವರಾಜ ಬೊಮ್ಮಾಯಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಬಸವರಾಜ ಬೊಮ್ಮಾಯಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬಸವರಾಜ ಬೊಮ್ಮಾಯಿ ದೇವಸ್ಥಾನ ಭೇಟಿ ಮುಂದುವರಿದಿದ್ದು, ಶ್ರೀ ಕ್ಷೇತ್ರ ಕಟೀಲು ಹಾಗೂ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.












Click it and Unblock the Notifications