ಮಣಿಪಾಲದಲ್ಲಿ ದಾರಿ ಮಧ್ಯೆಯೇ ಹೊತ್ತಿ ಉರಿದ ಕಾರು
ಉಡುಪಿ, ಏಪ್ರಿಲ್ 17: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಕಾರು ಭಸ್ಮವಾಗಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಕಾರಿನಲ್ಲಿ ಭಾಗೀರಥಿ ಎಂಬುವರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗುತ್ತಿದ್ದರು. ಆಸ್ಪತ್ರೆ ತಲುಪಲು ಇನ್ನೇನು ಕೆಲವೇ ಮೀಟರ್ ದೂರ ಇರುವಾಗ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತುಕೊಂಡು ಉರಿದಿದೆ. ಭಾಗೀರಥಿ ಅವರು ದುರ್ಘಟನೆಯಿಂದ ಪಾರಾಗಿದ್ದಾರೆ.
ಮೂಲತಃ ಉಡುಪಿಯ ಬನ್ನಂಜೆಯ ನಿವಾಸಿಯಾದ ಭಾಗೀರಥಿ ಅವರು ಸಂಬಂಧಿಕರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದರು. ಈ ಸಂದರ್ಭ ಬೆಂಕಿ ಹತ್ತಿಕೊಂಡಿದ್ದು, ತಕ್ಷಣವೇ ಕೆಎಂಸಿ ಮಣಿಪಾಲ ಆಸ್ಪತ್ರೆಯ ಫೈರ್ ಇಂಜಿನ್ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ ಡೌನ್ ಇದ್ದರಿಂದ ಇಷ್ಟು ದಿನ ಮನೆಯಲ್ಲೇ ಕಾರು ನಿಲ್ಲಿಸಿದ್ದರು. ಇಂದು ಕಾರು ಚಲಿಸಿಕೊಂಡು ಬಂದಿದ್ದಾರೆ. ಶಾರ್ಟ್ ಸರ್ಕ್ಯೂಟ್ ಆಗಲು ನಿಖರ ಕಾರಣ ತಿಳಿದುಬಂದಿಲ್ಲ.












Click it and Unblock the Notifications