ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆ ಮುಂದಿಟ್ಟ ಮಾಜಿ ಶಾಸಕ ರಘುಪತಿ ಭಟ್!
ಉಡುಪಿ, ಮೇ 26: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್‌ರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.
ಭಾನುವಾರ ಉಡುಪಿಯಲ್ಲಿ ಮಾತನಾಡಿದ ರಘುಪತಿ ಭಟ್, "ನಾನು ಕೈ ಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸು ಮಾಡಿದ್ದಾರೆ. ಯಾವ ಹುದ್ದೆಯಿಂದ ನನ್ನ ವಜಾ ಮಾಡಿದೆ" ಎಂದು ಪಕ್ಷ ಹೇಳಲಿ ಎಂದರು.

ಶನಿವಾರ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ರಘುಪತಿ ಭಟ್ ಉಚ್ಛಾಟಿಸಿ ಆದೇಶ ಹೊರಡಿಸಿದ್ದರು. ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು.
ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದರು. ಈ ಆದೇಶದ ಕುರಿತು ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಘುಪತಿ ಭಟ್, "ನಾನು ನರೇಂದ್ರ ಮೋದಿಗೆ ಬೈದಿಲ್ಲ. ರಾಜ್ಯ ನಾಯಕರನ್ನು ಟೀಕೆ ಮಾಡಿಲ್ಲ. ಇಂತಹ ವಜಾಗಳಿಗೆ ನಾನು ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆ ಬಗ್ಗೆ ನನಗೆ ಅಸಮಾಧಾನವಿದೆ" ಎಂದು ಹೇಳಿದರು.
"ಪಕ್ಷದ ನಾಯಕರನ್ನು ಟೀಕೆ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಪಕ್ಷಕ್ಕೆ ಬಂದರು. ಲೋಕಸಭೆ ಚುನಾವಣೆ ಟಿಕೆಟ್ ಪಡೆದು ಸ್ಪರ್ಧೆ ಮಾಡಿದರು. ಇದು ಶಾಶ್ವತ ವಜಾ ಅಲ್ಲ. ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ. ಬಿಜೆಪಿ ಕಾರ್ಯಕರ್ತನನ್ನು ವಜಾ ಮಾಡಲು ಸಾಧ್ಯವಿಲ್ಲ" ಎಂದರು.
ರಘುಪತಿ ಭಟ್ ಪ್ರಶ್ನೆಗಳು
* ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಯಾವ ಕ್ರಮವಾಗಿದೆ?
* ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರನ್ನು ಏನು ಮಾಡಿದ್ದೀರಿ?
* ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ಧೀರಾ?
* ಅಗೋಚರವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡುವವರ ಮೇಲೆ ಏನು ಕ್ರಮವಾಗಿದೆ?
* ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಆಗಿದೆ?
ರಘುಪತಿ ಭಟ್, "ನಾನು ವಿಚಲಿತನಾಗಿಲ್ಲ, ಜಗದೀಶ್ ಶೆಟ್ಟರ್ ಪ್ರಕರಣವೇ ಮಾದರಿ. ಕರಾವಳಿ ಬಿಜೆಪಿಯ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ, ಶಿಕ್ಷೆಯೂ ಜಾಸ್ತಿ. ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಪಕ್ಷ ಅಂತ ಕೆಲಸ ಮಾಡುತ್ತಾರೆ. ಕರಾವಳಿ ವಿಚಾರದಲ್ಲಿ ಬಿಜೆಪಿ ಮನಬಂದಂತೆ ನಡೆದುಕೊಳ್ಳುತ್ತಿದೆ" ಎಂದು ಆರೋಪಿಸಿದರು.
ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿಯದ ರಘುಪತಿ ಭಟ್‌ಗೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರಾದ ಲಿಂಗರಾಜ ಪಾಟೀಲ್ ಮೊದಲು ನೋಟಿಸ್ ನೀಡಿದ್ದರು. ಶನಿವಾರ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದರು.
ರಘುಪತಿ ಭಟ್ ಕಣಕ್ಕಿಳಿದಿರುವ ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಶಿವಮೊಗ್ಗ, ದಾವಣಗೆರೆ (ಹೊನ್ನಾಳಿ, ಚನ್ನಗಿರಿ) ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸೇರುತ್ತವೆ. ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಹಾಲಿ ಶಾಸಕರಾಗಿದ್ದರೂ ಸಹ 2023ರ ವಿಧಾನಸಭೆ ಟಿಕೆಟ್ ರಘುಪತಿ ಭಟ್ ಕೈತಪ್ಪಿತ್ತು. ಆದ್ದರಿಂದ ರಘುಪತಿ ಭಟ್ ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಶಿವಮೊಗ್ಗದ ಖ್ಯಾತ ವೈದ್ಯ ಧನಂಜಯ ಸರ್ಜಿ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆಯನೂರು ಮಂಜುನಾಥ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಕಣದಲ್ಲಿದ್ದಾರೆ.












Click it and Unblock the Notifications