ಉಡುಪಿ; ಕಡಿಮೆಯಾದ ಮಳೆ, ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡಲು ಸೂಚನೆ
ಬೆಂಗಳೂರು, ಆಗಸ್ಟ್ 25: "ಪ್ರಸ್ತುತ ಮಳೆ ಕಡಿಮೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಬೇಕು" ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು 169, 169ಎ ಗೆ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ ಹಾಕೆ, ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆ ಕಾಮಗಾರಿಗಳು ಪ್ರಗತಿಯಲಿದ್ದು, ಮುಂಗಾರು ಮಳೆಯ ಹಿನ್ನೆಲೆ, ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಮಳೆ ಕಡಿಮೆ ಇರುವ ಹಿನ್ನೆಲೆ, ಕಾಮಗಾರಿಗಳನ್ನು ಪುನರಾರಂಭಿಸಿ, ತ್ವರಿತ ಗತಿಯಲ್ಲಿ ಕೈಗೊಳ್ಳುವುದರೊಂದಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಮಣ್ಣು ಕುಸಿಯದಂತೆ ಕ್ರಮ ಕೈಗೊಳ್ಳಿ; ಶೋಭಾ ಕರಂದ್ಲಾಜೆ ಮಾತನಾಡಿ, "ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆ ಜಂಕ್ಷನ್‌ನಲ್ಲಿನ ಅಂಡರ್‌ಪಾಸ್ ಕಾಮಗಾರಿಯನ್ನು ಕೈಗೊಳ್ಳುವಾಗ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಣ್ಣು ಕುಸಿಯದ ಹಾಗೆ ರೀಟೈನಿಂಗ್ ವಾಲ್‌ಗಳನ್ನು, ಹೆಚ್ಚು ಕಾರ್ಮಿಕರುಗಳನ್ನು ನಿಯೋಜಿಸುವುದರೊಂದಿಗೆ 24*7 ಕಾಲಾವಧಿಯ ಶಿಫ್ಟ್‌ನಲ್ಲಿ ನಿರ್ಮಿಸಬೇಕೆಂದು" ಸೂಚನೆ ನೀಡಿದರು.
ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಬಂದರು ವರೆಗಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಕಾಮಗಾರಿಯನ್ನು ಪ್ರಾರಂಭಿಸಬೇಕು. ಈ ರಸ್ತೆಯಲ್ಲಿ ಹೆಚ್ಚು ಪ್ರವಾಸಿಗರು ಹಾಗೂ ಮೀನುಗಾರಿಕಾ ಚಟುವಟಿಕೆ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆ, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಬದಲಿ ರಸ್ತೆ ಮಾರ್ಗದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಬೇಕು ಎಂದು ಸಂಸದರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 169ನ ಇಂದ್ರಾಳಿ ರೈಲ್ವೆ ಸೇತುವೆಯ ಕಾಮಗಾರಿಯನ್ನು ನವೆಂಬರ್ ಒಳಗೆ ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವುದರೊಂದಿಗೆ ಕೈಗೊಳ್ಳಬೇಕು. ಈಗಾಗಲೇ ಸೇತುವೆಯ ಮೇಲೆ ಸಂಚರಿಸುತ್ತಿರುವ ವಾಹನಗಳ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಪೊಲೀಸ್ ಅಧೀಕ್ಷಕರ ಸೂಚನೆಯನ್ವಯ ಕೈಗೊಳ್ಳಬೇಕೆಂದರು.
ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಯಾವುದೇ ಕೊರತೆಗಳು ಆಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ರೈಲ್ವೆ ಹಳಿಗಳು ದಾಟುವ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ಪತ್ರವನ್ನು ನೀಡಬೇಕೆಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, "ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಂಡಾಗ ಮಾತ್ರ ಅಪಘಾತಗಳು ಆಗುವುದನ್ನು ತಪ್ಪಿಸಲು ಸಾಧ್ಯ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು" ಸಲಹೆ ನೀಡಿದರು.












Click it and Unblock the Notifications