ಬೈಂದೂರು: ಸತತ 43 ಗಂಟೆ ಸಮುದ್ರದಲ್ಲಿ ಈಜಾಡಿ ಸಾವು ಗೆದ್ದ ಮೀನುಗಾರ..!
ಮಂಗಳೂರು, ನವೆಂಬರ್ 12: ಅರಬ್ಬಿ ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಮೀನುಗಾರನ ರಕ್ಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರದ ಬಳಿ ಈ ಘಟನೆ ನಡೆದಿದೆ. ಬರೋಬ್ಬರಿ ನಲವತ್ತ ಮೂರು ಗಂಟೆಗಳ ಕಾಲ ಈಜಿ, ಈ ಮೀನುಗಾರ ಬಚಾವಾಗಿರುವುದು ಪವಾಡದಂತಾಗಿದೆ.
ಮೀನುಗಾರರದ್ದು ಸಾಹಸದ ಬದುಕು. ಒಮ್ಮೆ ಕಡಲಿಗಿಳಿದರೆ 15 ದಿನ ಸಮುದ್ರ ವಾಸ ಅನಿವಾರ್ಯ. ನಡು ನೀರಿನಲ್ಲಿ ಅವಘಡ ಸಂಭವಿಸಿದರೆ ಬದುಕಿ ಬರುವುದೇ ಕಷ್ಟ . ಅಂತದ್ದರಲ್ಲಿ ಮೀನುಗಾರನೊಬ್ಬ 43 ಗಂಟೆ ಈಜಿ ಪವಾಡ ಸದೃಶವಾಗಿ ಬದುಕಿ ಬಂದಿದ್ದಾರೆ. ತಮಿಳುನಾಡು ಮೂಲದ ಮೀನುಗಾರಿಕಾ ಬೋಟ್ ನಿಂದ ಮೀನುಗಾರ ಮುರುಗನ್ ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ ಆ ಬೋಟ್‌ನವರಿಗೆ ವಿಚಾರ ತಿಳಿದಿಲ್ಲ. ವಿಷಯ ತಿಳಿದಾಗ ಆತನ ಹುಡುಕಾಟ ಆರಂಭಿಸಿದ್ದರು.

ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಾ ಮುರುಗನ್ ದಡದತ್ತ ಬರುತ್ತಿದ್ದ. ಇದೇ ವೇಳೆಗೆ ಗಂಗೊಳ್ಳಿಯಿಂದ ತೆರಳುತ್ತಿದ್ದ ಬೇರೆ ಮೀನುಗಾರಿಕಾ ಬೋಟ್ ನವರಿಗೆ ಈ ಮೀನುಗಾರ ಸಿಕ್ಕಿದ್ದಾರೆ. ಆತನನ್ನು ಕಡಲಿನಿಂದ ಮೇಲಕ್ಕೆ ಎತ್ತಿದ ಮೀನುಗಾರರು ಜೀವ ಉಳಿಸಿದ್ದಾರೆ.
ಸರಿ ಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರನ ರಕ್ಷಣೆ ಮಾಡಿರೋದು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದೆ . ವಾರದ ಹಿಂದೆ ನಡೆದ ಈ ಘಟನೆ , ಕಡಲ ಮಕ್ಕಳನ್ನೇ ಅಚ್ಚರಿಗೆ ತಳ್ಳಿದೆ. ಸಂಪೂರ್ಣ ನಿತ್ರಾಣಗೊಂಡಿದ್ದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿದ್ದ ಗಂಗೊಳ್ಳಿ ಮೀನುಗಾರರು, ತಮಿಳ್ನಾಡಿನ ಬೋಟ್‌ನವರಿಗೆ ನಡು ನೀರಿನಲ್ಲೇ ಹಸ್ತಾಂತರ ಮಾಡಿದ್ದಾರೆ.
ಸಮುದ್ರಕ್ಕೆ ಬಿದ್ದ ಮೀನುಗಾರನ ಶವ ಹುಡುಕುತ್ತಿದ್ದ ತಮಿಳುನಾಡು ಮೀನುಗಾರರಿಗೆ ಈತ ಬದುಕಿ ಬಂದಿರೋದು ಕಂಡು ಎಲ್ಲಿಲ್ಲದ ಖುಷಿಯಾಗಿದೆ. ಗಂಗೊಳ್ಳಿ ಬೋಟ್ ನ ಮೀನುಗಾರರಿಗೆ ಧನ್ಯವಾದ ತಿಳಿಸಿ ತಮಿಳ್ನಾಡಿಗೆ ವಾಪಾಸ್ಸಾಗಿದ್ದಾರೆ. ಕಡಲ ಮಕ್ಕಳದ್ದು ಅನಿಶ್ಚಿತ ಬದುಕು. ಅದರಲ್ಲೂ ಕಾರ್ಮಿಕರಾಗಿ ದುಡಿಯುವ ಅನ್ಯ ರಾಜ್ಯದ ಮೀನುಗಾರರು, ಊರವರ ಸಂಪರ್ಕವಿಲ್ಲದೆ ತಿಂಗಳುಗಟ್ಟಲೆ ಕಳೆಯುತ್ತಾರೆ. ಇಂಥ ಪರಿಸ್ಥಿತಿಯಲ್ಲೂ ಮುರುಗನ್ ಬದುಕಿ ತವರು ಸೇರಿರೋದು ಅದ್ಭುತವೇ ಸರಿ.












Click it and Unblock the Notifications